ಪರಿಭಾವಿತ ಅರಣ್ಯ ಪ್ರದೇಶ ಸರ್ವೇಗೆ ಚಿಕ್ಕಮಗಳೂರು ಡಿಸಿ ಆದೇಶ: ಬೀದಿಪಾಲಾಗುವ ಆತಂಕದಲ್ಲಿ ಕೃಷಿಕರು, ಗಿರಿಜನರು

Update: 2019-04-29 23:01 IST
ಪರಿಭಾವಿತ ಅರಣ್ಯ ಪ್ರದೇಶ ಸರ್ವೇಗೆ ಚಿಕ್ಕಮಗಳೂರು ಡಿಸಿ ಆದೇಶ: ಬೀದಿಪಾಲಾಗುವ ಆತಂಕದಲ್ಲಿ ಕೃಷಿಕರು, ಗಿರಿಜನರು
  • whatsapp icon

ಚಿಕ್ಕಮಗಳೂರು, ಎ.29: ಕಂದಾಯ ಅರಣ್ಯ ಭೂಮಿಗಳ ಗಡಿ ಗುರುತಿಗಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಇತ್ತೀಚೆಗೆ ಹೊರಡಿಸಿರುವ ಆದೇಶವೊಂದು ಜಿಲ್ಲಾದ್ಯಂತ ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ಈ ಆದೇಶದಿಂದಾಗಿ ಸಾವಿರಾರು ಕೃಷಿಕರು ಬೀದಿಪಾಲಾಗಲಿದ್ದಾರೆಂಬ ಭೀತಿಯಿಂದಾಗಿ ಆದೇಶ ಹಿಂಪಡೆಯಬೇಕೆಂಬ ಒತ್ತಾಯ ಒಂದೆಡೆಯಾದರೆ, ಈ ಸರ್ವೇಯಿಂದಾಗಿ ಜಿಲ್ಲೆಯ ಕಂದಾಯ ಅರಣ್ಯ ಭೂಮಿ ಸಮಸ್ಯೆ ಬಗೆಹರಿಯಲಿದ್ದು, ಸರ್ವೇಯನ್ನೂ ಶೀಘ್ರ ಪೂರ್ಣಗೊಳಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಜನರು ಹಾಗೂ ಕೃಷಿಕರ ಪಾಲಿಗೆ ಸರಕಾರ ಹಾಗೂ ನ್ಯಾಯಾಲಯ ಆಗಿಂದಾಗ್ಗೆ ಹೊರಡಿಸುತ್ತಿರುವ ಕಂದಾಯ, ಅರಣ್ಯ ಭೂಮಿ ಸಂಬಂಧದ ಆದೇಶಗಳು ಮರಣಶಾಸನವಾಗಿ ಪರಿಣಮಿಸುತ್ತಿವೆ. ಹುಲಿಯೋಜನೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಸ್ತೂರಿ ರಂಗನ್ ವರದಿ, ಅರಣ್ಯವಾಸಿಗಳ ಎತ್ತಂಗಡಿ, ಕುದುರೆಮುಖ ಗಣಿಗಾರಿಕೆ, ಭದ್ರಾ ಡ್ಯಾಂ, ಇನಾಂಭೂಮಿ, ಡೀಮ್ಡ್( ಪರಿಭಾವಿತ ಅರಣ್ಯ) ಅರಣ್ಯ ಹಾಗೂ ಅರಣ್ಯ ಕಾಯ್ದೆಗಳಂತಹ ನ್ಯಾಯಾಲಯ ಹಾಗೂ ಸರಕಾರದ ಆದೇಶಗಳು ಜಿಲ್ಲೆಯ ಜನರು ಹಾಗೂ ಕೃಷಿಕರು, ಕಾಫಿ, ಅಡಿಕೆ ಬೆಳೆಗಾರರ ಪಾಲಿಗೆ ತೂಗು ಕತ್ತಿಯಾಗಿ ಪರಿಣಮಿಸಿವೆ. ಈ ಯೋಜನೆಗಳ ಜಾರಿಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧಗಳು ಕೇಳಿ ಬಂದಿದ್ದು, ಈ ವಿರೋಧಗಳ ನಡುವೆಯೂ ಕೆಲ ಯೋಜನೆಗಳು ಜಾರಿಯಾಗಿವೆ. ಪರಿಣಾಮ ಸಾಕಷ್ಟು ಗಿರಿಜನರು, ಸಾರ್ವಜನಿಕರು ಹಾಗೂ ಕೃಷಿಕರು ಈ ಯೋಜನೆಗಳಿಂದಾಗಿ ಸಂತ್ರಸ್ಥರಾಗಿದ್ದಾರೆ.
ಈ ಯೋಜನೆಗಳು ಜಿಲ್ಲೆಯಾದ್ಯಂತ ಸಾರ್ವಜನಿಕರು ಹಾಗೂ ಕೃಷಿಕರ ಪಾಲಿಗೆ ಇನ್ನೂ ತೂಗುಕತ್ತಿಯಾಗಿರುವಂತೆಯೇ, ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಪರಿಭಾವಿತ ಅರಣ್ಯ ಪ್ರದೇಶಗಳ ಸರ್ವೆಗೆ ಕಂದಾಯ-ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಈಗಾಗಲೇ ಕಂದಾಯ-ಅರಣ್ಯ ಇಲಾಖಾಧಿಕಾರಿಗಳ ನೇತೃತ್ವದ ಅಧಿಕಾರಿಗಳು, ಸಿಬ್ಬಂದಿಯ 42 ತಂಡಗಳ ಮೂಲಕ ಜಂಟಿ ಸರ್ವೇಗೆ ಆದೇಶ ನೀಡಿದ್ದಾರೆ. ಈ ತಂಡ ಈಗಾಗಲೇ ಪರಿಭಾವಿತ ಅರಣ್ಯದ ಜಂಟಿ ಸರ್ವೆಗೆ ಕಾರ್ಯಪ್ರವೃತ್ತವಾಗಿದೆ.

ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಎಷ್ಟು?
ಚಿಕ್ಕಮಗಳೂರು ಜಿಲ್ಲಾಧಿಕಾರಿ ಇತ್ತೀಚೆಗೆ ಹೇಳಿರುವಂತೆ ಜಿಲ್ಲೆಯಾದ್ಯಂತ ಒಟ್ಟಾರೆ 1,07,946 ಹೆಕ್ಟೇರ್ ಪ್ರದೇಶ ಪರಿಭಾವಿತ ಅರಣ್ಯವಿದೆ. ಈ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 21,032 ಹೆಕ್ಟೇರ್, ಮೂಡಿಗೆರೆ ತಾಲೂಕಿನಲ್ಲಿ 34,805 ಹೆಕ್ಟೇರ್, ಕಡೂರು ತಾಲೂಕಿನಲ್ಲಿ 4,472 ಹೆಕ್ಟೇರ್, ತರೀಕೆರೆ ತಾಲೂಕಿನ 4,011 ಹೆಕ್ಟೇರ್, ಅಜ್ಜಂಪುರ ತಾಲೂಕಿನ 2,253, ಕೊಪ್ಪ ತಾಲೂಕಿನಲ್ಲಿ 12,142 ಹೆಕ್ಟೇರ್, ಶೃಂಗೇರಿ ತಾಲೂಕಿನಲ್ಲಿ 20,132 ಹೆಕ್ಟೆರ್ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ 9,036 ಹೆಕ್ಟೇರ್ ಪ್ರದೇಶ ಪರಿಭಾವಿತ ಅರಣ್ಯ ಪ್ರದೇಶವಿದೆ ಎಂದು ಅಂದಾಜಿಸಲಾಗಿದ್ದು, ಮುಂದಿನ 50 ದಿನಗಳಲ್ಲಿ ಪರಿಭಾವಿತ ಅರಣ್ಯ ಪ್ರದೇಶಗಳ ಜಂಟಿ ಸರ್ವೆ ಪೂರ್ಣಗೊಳಿಸಿ ಸರಕಾರ ಮತ್ತು ನ್ಯಾಯಾಲಯಕ್ಕೆ ವರದಿ ನೀಡಬೇಕಿದೆ.

ಜಂಟಿ ಸರ್ವೆಗೆ ಪರ ವಿರೋಧ:
ಪರಿಭಾವಿತ ಅರಣ್ಯ ಪ್ರದೇಶದ ಜಂಟಿ ಸರ್ವೆಗೆ ಜಿಲ್ಲಾಧಿಕಾರಿ ಆದೇಶ ಮಾಡಿರುವ ವಿಷಯ ಹೊರಬೀಳುತ್ತಿದ್ದಂತೆ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದಕ್ಕೆ ಪರ ವಿರೋಧ ವ್ಯಕತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಂದಾಯ ಭೂಮಿ ಯಾವುದು, ಅರಣ್ಯ ಭೂಮಿ ಯಾವುದೆಂಬ ಗೊಂದಲವಿದೆ. ಕಂದಾಯ ಅರಣ್ಯ ಭೂಮಿಯ ಜಂಟಿ ಸರ್ವೆಯಿಂದಾಗಿ ಈ ಭೂಮಿಗಳ ವರ್ಗೀಕರಣ ಸಾಧ್ಯವಾಗಲಿದೆ. ಜಿಲ್ಲಾದ್ಯಂತ ನಿವೇಶನ ರಹಿತರ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿದ್ದು, ನಿಖರ ಸರ್ವೆಯಿಂದಾಗಿ ಅರಣ್ಯ-ಕಂದಾಯ ಜಾಗಗಳ ಗಡಿ ತಿಳಿದು ಬರುವುದರಿಂದ ನಿವೇಶನ ಒದಗಿಸಲು ಇರುವ ಸಮಸ್ಯೆ ಇದರಿಂದಾಗಿ ಬಗೆಹರಿಯಲಿದೆ, ಕಂದಾಯ ಭೂಮಿ ಗಡಿ ಗುರುತಿನಿಂದಾಗಿ ಇತರ ಉದ್ದೇಶಗಳಿಗೆ ಅಗತ್ಯವಾಗಿರುವ ಕಂದಾಯ ಭೂಮಿ ಲಭ್ಯವಾಗಲಿದೆ. ಶೀಘ್ರ ಜಂಟಿ ಸರ್ವೆಯನ್ನು ಪೂರ್ಣಗೊಳಿಸಬೇಕು ಎಂಬ ಅಭಿಪ್ರಾಯವನ್ನು ಕೆಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪರಿಸರವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. 

ಪರಿಭಾವಿತ ಅರಣ್ಯ ಪ್ರದೇಶ ಯಾವುದೆಂಬ ಬಗ್ಗೆ ಗೊಂದಲವಿದ್ದು, ಹಿಂದೆ ಸಾರ್ವಜನಿಕ ಉಪಯೋಗಕ್ಕಾಗಿದ್ದ ಜಾಗವನ್ನು ಕೃಷಿಕರು ಒತ್ತುವರಿ ಮಾಡಿ ಕೃಷಿ ಭೂಮಿ ಮಾಡಿಕೊಂಡಿರುವ ರೈತರ ಸಂಖ್ಯೆ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿದೆ. ಇಂತಹ ಜಮೀನುಗಳಿಗೆ ಸಾಗುವಳಿ ಚೀಟಿಯನ್ನೂ ನೀಡಲಾಗಿದೆ. ಸದ್ಯ ಈ ಅರಣ್ಯ ಪ್ರದೇಶದ ಸರ್ವೆ ನಡೆದು ಕೃಷಿ ಭೂಮಿ, ಮನೆ, ನಿವೇಶನ ಹೊಂದಿರುವ ಜಾಗಗಳೂ ಪರಿಭಾವಿತ ಅರಣ್ಯ ಎಂದು ಘೋಷಣೆಯಾದಲ್ಲಿ ಇಂತಹ ಅರಣ್ಯದಲ್ಲಿರುವ ಕೃಷಿಕರು, ಸಾರ್ವಜನಿಕರು ಬೀದಿಪಾಲಾಗುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ಹಿಂಪಡೆಯಬೇಕೆಂಬ ವಾದವನ್ನೂ ಕೆಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತಪರ ಹೋರಾಟಗಾರರು ಮುಂದಿಟ್ಟಿದ್ದಾರೆ. ಇತ್ತೀಚೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಜಂಟಿ ಸರ್ವೆ ಆದೇಶವನ್ನು ಸ್ವಾಗತಿಸಿದ್ದರೆ, ಮಾಜಿ ಸಚಿವ ಜೀವರಾಜ್ ಜಿಲ್ಲಾಧಿಕಾರಿ ಸರ್ವೆ ಆದೇಶವನ್ನು ಹಿಂಪಡೆಯಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಕೃಷಿಕರಲ್ಲಿ ಮನೆಮಾಡಿದ ಆತಂಕ:
ಜಿಲ್ಲೆಯಲ್ಲಿರುವ ಪರಿಭಾವಿತ ಅರಣ್ಯ ಪ್ರದೇಶ ಇಂತಿಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಅಧಿಕಾರಿಗಳು ಕಂಪ್ಯೂಟರ್ ದಾಖಲೆಗಳನ್ನು ಆಧರಿಸಿ ಹೇಳುತ್ತಿದ್ದಾರೆಯೇ ಹೊರತು ಈ ಹಿಂದೆ ಡೀಮ್ಡ್ ಫಾರೆಸ್ಟ್ ನ ಸರ್ವೆ ನಡೆದಿರುವ ಬಗ್ಗೆ ದಾಖಲೆಗಳೇ ಇಲ್ಲ. ಅಸಲಿಗೆ ಡೀಮ್ಡ್ ಫಾರೆಸ್ಟ್ ಎಂಬುದು ಕಾಲ್ಪನಿಕ ಊಹೆಯಾಗಿದ್ದು, ಸದ್ಯ ಡೀಮ್ಡ್ ಫಾರೆಸ್ಟ್ ಎಂದು ಕರೆಯಲಾಗುತ್ತಿರುವ ಜಮೀನಿನ ಪೈಕಿ ಬಹುತೇಕ ಜಮೀನು ಕೃಷಿಕರಿಂದ ಒತ್ತುವರಿಯಾಗಿ ಕೃಷಿ ಜಮೀನುಗಳು, ಮನೆಗಳು, ನಿವೇಶನಗಳು, ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಇವುಗಳ ಪೈಕಿ ಕೆಲವು ಜಾಗ, ಜಮೀನುಗಳಿಗೆ ಸರಕಾರವೇ ಸಾಗುವಳಿ ಚೀಟಿ ನೀಡಿದ್ದು, ಸಾವಿರಾರು ರೈತರು ಈ ಹಿಂದೆ ಡೀಮ್ಡ್ ಫಾರೆಸ್ಟ್ ಎನ್ನಾಲಾಗುತ್ತಿರುವ ಜಾಗದಲ್ಲಿ ತಾವು ಮಾಡಿದ ಕೃಷಿ ಭೂಮಿಗೆ ಹಕ್ಕುಪತ್ರ ಪಡೆಯುವ ಸಲುವಾಗಿ ಫಾರಂ ನಂ.50, 51 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಫಾರ್ಮ್ ನಂ. 53 ಮತ್ತು 57ರಲ್ಲೂ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳು ವಿಲೇವಾರಿ ಬಾಕಿ ಇವೆ. ಈಗ ಜಂಟಿ ಸರ್ವೆ ಆದೇಶ ಪೂರ್ಣಗೊಂಡು ಕೃಷಿಕರ ಜಮೀನುಗಳು ಈ ಡೀಮ್ಡ್ ಫಾರೆಸ್ಟ್ ನಲ್ಲಿದ್ದ ಪಕ್ಷದಲ್ಲಿ ಅಂತಹ ಕೃಷಿ ಮಾಡಿದ ಜಮೀನುಗಳೂ ಅರಣ್ಯ ಪ್ರದೇಶವಾಗಿ ಮಾರ್ಪಡಲಿವೆ. ಆಗ ಕೃಷಿ ಮಾಡಿದ ಅಥವ ಮನೆ ಕಟ್ಟಿ ವಾಸಿಸುತ್ತಿರುವ ಕುಟುಂಬಗಳು ಯಾವ ಪರಿಹಾರವಿಲ್ಲದೇ ಬೀದಿಪಾಲಗುವಂತಹ ಸಂದಿಗ್ದ ಪರಿಸ್ಥಿತಿಗೆ ಸಿಲುಕಲಿದ್ದಾರೆ. ಏಕೆಂದರೆ ಒಮ್ಮೆ ಡೀಮ್ಡ್ ಫಾರೆಸ್ಟ್ ಎಂದು ಸರ್ವೆ ಮೂಲಕ ತಿಳಿದು ಬಂದ ಕೃಷಿ ಜಮೀನನ್ನು ಅರಣ್ಯ ಪ್ರದೇಶ ಎಂದೇ ಘೋಷಿಸಬೇಕೆಂದು ಸುಪ್ರೀಂ ಕೋರ್ಟ್‍ನ ಆದೇಶ ಈಗಾಗಲೇ ಚಾಲ್ತಿಯಲ್ಲಿದೆ. ಈ ಕಾರಣಕ್ಕೆ ಈ ಜಂಟಿ ಸರ್ವೆಗೆ ಜಿಲ್ಲೆಯಲ್ಲಿ ವಿಶೇಷವಾಗಿ ಮಲೆನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಡೀಮ್ಡ್ ಪಾರೆಸ್ಟ್ ಸರ್ವೆ ಹೇಗೆ?
ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಆದೇಶ ನೀಡಿರುವಂತೆ ಒಂದು ಹೆಕ್ಟೆರ್ ಪ್ರದೇಶದಲ್ಲಿ 25ಕ್ಕಿಂತ ಹೆಚ್ಚು ಮರ, ಗಿಡಿಗಳಿದ್ದರೆ ಹಾಗೂ ಶೇ.40ರಷ್ಟು ದಟ್ಟ ಕಾಡಿದ್ದಲ್ಲಿ ಅದನ್ನು ಅರಣ್ಯ ಎಂದು ಘೋಷಿಸಬೇಕಾಗಿದೆ. ಜಿಲ್ಲೆಯ ಕೃಷಿಕರು ಹೊಂದಿರುವ 1 ಎಕರೆ ಕೃಷಿ ಜಮೀನಿನಲ್ಲಿ ನೂರಾರು ಕಾಡು ಮರಗಳಿರುವುದು ಸಾಮಾನ್ಯವಾಗಿದ್ದು, ಜಂಟಿ ಸರ್ವೆ ಮೂಲಕ ಹೀಗೆ 25ಕ್ಕಿಂತ ಹೆಚ್ಚು ಮರಗಳಿರುವ ಕೃಷಿ ಭೂಮಿಯನ್ನು ಸರ್ವೆ ಅಧಿಕಾರಿಗಳ ತಂಡ ಪರಿಭಾವಿತ ಅರಣ್ಯ ಎಂದು ನಮೂದು ಮಾಡಲಿದ್ದಾರೆ. 

ಹಿಂದಿನ ಜಿಲ್ಲಾಧಿಕಾರಿ ಗೋಪಾಲ ಕೃಷ್ಣೆಗೌಡ ಮಾಡಿದ ಯಡವಟ್ಟು: 
ಜಿಲ್ಲೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಿದ್ದ ಸುಮಾರು 1 ಲಕ್ಷ 38 ಸಾವಿರ ಹೆಕ್ಟೆರ್ ಜಾಗವನ್ನು ಚಿಕ್ಕಮಗಳೂರಿನಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗೋಪಾಲಕೃಷ್ಣೇಗೌಡ ಎಂಬವರು ಕೆಲ ರಾಜಕಾರಣಿಗಳ ಮೇಲಿನ ಜಿದ್ದಿನಿಂದಾಗಿ ಯಾರ ಅನುಮತಿ ಪಡೆಯದೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸದೇ ಕೇವಲ ಕಂಪ್ಯೂಟರ್ ದಾಖಲೆ ಆಧರಿಸಿ ರಾತ್ರೋರಾತ್ರಿ ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಿ ರಾಜಕಾರಣಿಯೊಬ್ಬರ ಜಮೀನು ಸೇರಿದಂತೆ ಸಾರ್ವಜನಿಕರ ಉಪಯೋಗಕ್ಕಾಗಿದ್ದ 1 ಲಕ್ಷ 38 ಸಾವಿರ ಹೆಕ್ಟೆರ್ ಭೂಮಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇದು ಇಂದಿಗೂ ಅರಣ್ಯ ಇಲಾಖೆಯ ಪ್ರಸ್ತಾವನೆಯಲ್ಲಿದೆ. ಅಂದಿನ ಜಿಲ್ಲಾಧಿಕಾರಿ ಮಾಡಿದ ಆ ಯಡವಟ್ಟಿನಿಂದಾಗಿ ನ್ಯಾಯಾಲಯ ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟ್ ಅನ್ನು ವರ್ಗೀಕರಣ ಮಾಡಬೇಕೆಂದು ಆದೇಶ ನೀಡಿದೆ. ಜಿಲ್ಲಾಡಳಿತ ಡೀಮ್ಡ್ ಫಾರೆಸ್ಟ್ ನ ವಿಭಾಗ ಮಾಡುವ ಉದ್ದೇಶದಿಂದ ಸದ್ಯ ಜಂಟಿ ಸರ್ವೇಗೆ ಮುಂದಾಗಿರುವುದು ಮಲೆನಾಡಿನ ಜನರಿಗೆ ಮರಣಶಾಸನವಾಗಿ ಮಾರ್ಪಟ್ಟಿದೆ.

ಡೀಮ್ಡ್ ಫಾರೆಸ್ಟ್ ಸರ್ವೆಯಿಂದಾಗಿ ಕೃಷಿಕರಲ್ಲಿ ಆತಂಕ ಮನೆಮಾಡುವಂತಾಗಿದೆ. ಒಮ್ಮೆ ಕೃಷಿ ಭೂಮಿ ಪರಿಭಾವಿತ ಅರಣ್ಯ ಎಂದು ಜಂಟಿ ಸರ್ವೆಯಿಂದ ತಿಳಿದು ಬಂದಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಅಂತಹ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆತುರದ ನಿರ್ಧಾರಕ್ಕೆ ಮುಂದಾಗಬಾರದು. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಖುದ್ದು ಭೇಟಿಯಾಗಿ ಚರ್ಚೆ ನಡೆಸಲಾಗುವುದು. 
- ಟಿ.ಡಿ.ರಾಜೇಗೌಡ, ಶಾಸಕ, ಶೃಂಗೇರಿ ವಿಧಾನಸಭೆ ಕ್ಷೇತ್ರ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News