ಚಿಕ್ಕಮಗಳೂರು: ಬರದಿಂದ ತತ್ತರಿಸಿದ್ದ ರೈತರ ಕೃಷಿಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅಡ್ಡಗಾಲು
ಚಿಕ್ಕಮಗಳೂರು, ಮೇ 13: ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಗಾಗಿ ಈಗಾಗಲೇ ಕೇಂದ್ರ ಸರಕಾರ 294 ಕೋ. ರೂ. ಅನುದಾನ ಮಂಜೂರು ಮಾಡಿದ್ದು, ರಸ್ತೆ ಅಗಲೀಕರಣ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಚಾಲನೆ ನೀಡಿದೆ. ಆದರೆ ಹಾಲಿ ಇರುವ ಕಡೂರು-ಚಿಕ್ಕಮಗಳೂರು ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ಸಾವಿರಾರು ರೈತರು ಕೃಷಿ ಜಮೀನುಗಳನ್ನು ಹೊಂದಿದ್ದು, ರಸ್ತೆ ಅಗಲೀಕರಣದ ವೇಳೆ ಎರಡೂ ಬದಿಗಳಲ್ಲಿರುವ ಕೃಷಿ ಜಮೀನುಗಳ ಪೈಕಿ ಎಷ್ಟು ಅಡಿ ಕೃಷಿ ಜಮೀನು ಹೆದ್ದಾರಿ ಪಾಲಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ರೈತರು ಗೊಂದಲಕ್ಕೆ ಬಿದ್ದಿದ್ದು, ಈ ಕಾರಣಕ್ಕೆ ರಸ್ತೆ ಬದಿಯ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ಹಿಂದೆ ಮುಂದೆ ನೋಡುವಂತಾಗಿದೆ ಎಂಬ ಆರೋಪ ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಸಖರಾಯಪಟ್ಟಣ ಹಾಗೂ ಕಡೂರು ತಾಲೂಕು ಸತತ ಬರಗಾಲಕ್ಕೆ ತುತ್ತಾಗಿದ್ದು, ಈ ಭಾಗದ ಗ್ರಾಮಗಳ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಇಲ್ಲಿನ ರೈತರು ತೀವ್ರ ಬರಗಾಲದಿಂದಾಗಿ ತಮ್ಮ ಕೃಷಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸದೇ ಪಾಳುಬಿಡುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಈ ಬಾರಿ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣವಾಗಿ ಮಳೆ ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಕೃಷಿ ಜಮೀನು ತೇವಗೊಂಡಿದ್ದರಿಂದ ಸಂತಸಗೊಂಡಿರುವ ರೈತರು ಕೃಷಿ ಚಟುವಟಿಕೆ ಆರಂಭಿಸಲು ಹೊಲಗದ್ದೆಗಳತ್ತ ಮುಖಮಾಡಿದ್ದಾರೆ. ಕೆಲ ರೈತರು ತಮ್ಮ ಜಮೀನುಗಳನ್ನು ಕೃಷಿಗಾಗಿ ಹದಗೊಳಿಸುವ ಕೆಲಸವನ್ನೂ ಆರಂಭಿಸಿದ್ದಾರೆ.
ಆದರೆ ಕಡೂರಿನಿಂದ ಚಿಕ್ಕಮಗಳೂರು ನಗರದವರೆಗಿನ 40 ಕಿ.ಮೀ ಉದ್ದದ ಎನ್.ಎಚ್.173 ಹೆದ್ದಾರಿಯ ಇಕ್ಕೆಲಗಳಲ್ಲಿ ಸಾವಿರಾರು ರೈತರು ಕೃಷಿ ಜಮೀನನ್ನು ಹೊಂದಿದ್ದು, ರಸ್ತೆಗಾಗಿ ಇಕ್ಕೆಲಗಳಲ್ಲಿರುವ ರೈತರು ಹೊಂದಿರುವ ಕೃಷಿ ಜಮೀನಿನ ಪೈಕಿ ಎಷ್ಟು ಅಡಿಗಳಷ್ಟು ಜಮೀನನ್ನು ರಸ್ತೆಗಾಗಿ ಬಿಡಬೇಕೆಂಬುದರ ಬಗ್ಗೆ ಹೆದ್ದಾರಿ ಪ್ರಾಧಿಕಾರವಾಗಲೀ, ಜಿಲ್ಲಾಡಳಿತವಾಗಲೀ ಯಾವುದೇ ನೋಟಿಸ್ ನೀಡದೇ ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಮೂಡಿಗೆರೆ-ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿ ಹಾದು ಹೋಗಿರುವ ಎನ್‍ಎಚ್-173 ಒಟ್ಟು 76 ಕಿ.ಮೀ ಉದ್ದದ ಹೆದ್ದಾರಿಯಾಗಿದೆ. ಈ ಪೈಕಿ ಕಡೂರಿನಿಂದ ಚಿಕ್ಕಮಗಳೂರು ನಗರದ ಮೂಗ್ತಿಹಳ್ಳಿಯಲ್ಲಿರುವ ಸೆರಾಯ್ ಹೊಟೇಲ್‍ವರಗೆ ಮೊದಲ ಹಂತದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸರ್ವೇ ಮತ್ತಿತರ ತಾಂತ್ರಿಕ ಕಾರಣದಿಂದಾಗಿ ಚಿಕ್ಕಮಗಳೂರು-ಮೂಡಿಗೆರೆ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಡೂರು-ಚಿಕ್ಕಮಗಳೂರು ಹೆದ್ದಾರಿ ಅಗಲೀಕರಣ ಕಾಮಗಾರಿ ಭಾಗವಾಗಿ ಈಗಾಗಲೇ ಕಡೂರು ಪಟ್ಟಣದಿಂದ ಸಖರಾಯಪಟ್ಟಣ ಸಮೀಪದ ಸರಸ್ವತಿಪುರ ಗ್ರಾಮದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು, ರಸ್ತೆಯ ಎರಡೂ ಬದಿಗಳಲ್ಲಿರುವ ಮರಗಳ ತೆರವು ಮಾಡಿರುವುದಲ್ಲದೇ ಹೆದ್ದಾರಿ ಪಾಲಾಗುವ ರಸ್ತೆ ಬದಿಯ ಜಮೀನುಗಳ ಬೇಲಿಗಳನ್ನು ಕಿತ್ತುಹಾಕಲಾಗಿದೆ. ಹೆದ್ದಾರಿಗಾಗಿ ಪಡೆಯಲಾದ ರೈತರ ಕೃಷಿ ಜಮೀನುಗಳಲ್ಲಿ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ಜಲ್ಲಿ, ಕಾಂಕ್ರೀಟ್ ಹಾಕಲಾಗುತ್ತಿದೆ.
ಆದರೆ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತರು ಜಿಲ್ಲಾಡಳಿತ ಹಾಗೂ ಸಂಸದರ ವಿರುದ್ಧ ದೂರು ಹೇಳುತ್ತಿದ್ದು, ರಸ್ತೆ ಅಗಲೀಕರಣ ಮಾಡುವ ಮುನ್ನ ಸರ್ವೇ ನಡೆಸಿ, ಹೆದ್ದಾರಿ ಪಾಲಾಗುವು ರೈತರ ಕೃಷಿ ಜಮೀನುಗಳ ಸಂಬಂಧ ರೈತರಿಗೆ ನೋಟಿಸ್ ನೀಡಬೇಕು. ರೈತರ ಎಷ್ಟು ಅಡಿ ಜಮೀನು ಹೆದ್ದಾರಿಗೆ ಸೇರಲಿದೆ ಎಂಬುದನ್ನು ಲಿಖಿತವಾಗಿ ತಿಳಿಸಬೇಕು. ಭೂ ಸ್ವಾದೀನ ಮಾಡಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು. ಆದರೆ ಜಿಲ್ಲಾಡಳಿತವಾಗಲೀ, ಹೆದ್ದಾರಿ ಪ್ರಾಧಿಕಾರವಾಗಲೀ ಅಥವಾ ಕೇಂದ್ರ ಸರಕಾರವಾಗಲೀ ಈ ಸಂಬಂಧ ಜಮೀನು ಕಳೆದುಕೊಂಡ ಇಲ್ಲಿನ ಯಾವ ರೈತರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಈ ಭಾಗದ ರೈತರು ಆರೋಪಿಸುತ್ತಿದ್ದಾರೆ.
ಒಂದೆಡೆ ಹೆದ್ದಾರಿ ಅಗಲೀಕರಣ ನಡೆಯುತ್ತಿದ್ದರೇ ಮತ್ತೊಂದೆಡೆ ಮಳೆ ಬಂದು ಭೂಮಿ ಹದವಾಗಿದೆ. ಬರದಿಂದ ತತ್ತರಿಸಿದ್ದ ರೈತರು ಈ ಬಾರಿಯಾದರೂ ಕೃಷಿ ಚಟುವಟಿಕೆ ಆರಂಭಿಸುವ ಆಸೆಯಿಂದ ಜಮೀನುಗಳತ್ತ ಮುಖಮಾಡಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಜಮೀನು ಹೊಂದಿರುವ ರೈತರು ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಕೃಷಿ ಚಟುವಟಿಕೆ ಆರಂಭಿಸದಂತಾಗಿದೆ ಎಂದು ಇಲ್ಲಿನ ರೈತರು ಅಳಲು ತೋಡಿಕೊಳ್ಳುತ್ತಿದ್ದು, ಕೃಷಿ ಜಮೀನು ಹದ ಮಾಡುವ ಮುನ್ನ ಜಮೀನು ಸುತ್ತಲು ಜಾನುವಾರುಗಳಿಂದ ಬೆಳೆ ರಕ್ಷಿಸಲು ಬೇಲಿ ಮಾಡುವುದು ಹಾಗೂ ಜಮೀನು ಸುತ್ತ ಬದುಗಳ ನಿರ್ಮಾಣ, ಚರಂಡಿ ನಿರ್ಮಿಸಿಕೊಳ್ಳುವುದು ಅತ್ಯಗತ್ಯ. ಆದರೆ ರಸ್ತೆ ಅಗಲೀಕರಣ ಮಾಡುವ ವೇಳೆ ಎಷ್ಟು ಅಡಿ ಕೃಷಿ ಜಮೀನು ಹೆದ್ದಾರಿಗೆ ಸೇರಲಿದೆ ಎಂಬುದರ ಮಾಹಿತಿಯೇ ಇಲ್ಲದ ಕಾರಣಕ್ಕೆ ಕೃಷಿ ಚಟುವಟಿಕೆ ಆರಂಭಿಸಲು ರೈತರು ಹಿಂದು ಮುಂದು ನೋಡುವಂತಾಗಿದೆ ಎಂಬ ಗೊಂದಲದಲ್ಲಿ ಕೃಷಿಕರು ದಿನಕಳೆಯುತ್ತಿದ್ದಾರೆ. ಇಂತಹ ಯೋಜನೆಗಳಿಗೆ ಕೃಷಿ ಜಮೀನು ಒಳಪಡುವ ಸಂದರ್ಭದಲ್ಲಿ ಭೂ ಸ್ವಾದೀನ ಪ್ರಾಧಿಕಾರ ಜಾಹೀರಾತು ಮೂಲಕ ಸಾರ್ವಜನಿಕ ಪ್ರಕಟನೆ ಹೊರಡಿಸುವುದು ಸಾಮಾನ್ಯ. ಆದರೆ ಕಡೂರು-ಚಿಕ್ಕಮಗಳೂರು ಹೆದ್ದಾರಿ ಅಗಲೀಕರಣ ಯೋಜನೆ ಸಂಬಂಧ ಇಂತಹ ಯಾವ ಪ್ರಕಟನೆಗಳೂ ಹೊರಬಿದ್ದಂತಿಲ್ಲ ಎಂಬುವುದು ರೈತರ ದೂರಾಗಿದೆ.
ಇನ್ನು ಈ ಬಗೆಗಿನ ಗೊಂದಲವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಾಡುವವರನ್ನು, ಗುತ್ತಿಗೆದಾರರನ್ನು ಕೇಳಿದರೆ, ಈ ಬಗ್ಗೆ ನಮನ್ನು ಕೇಳಬೇಡಿ, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳನ್ನು ಕೇಳಿ, ಜಿಲ್ಲಾಡಳಿತವನ್ನು ಸಂಪರ್ಕಿಸಿ ಎನ್ನುತ್ತಿದ್ದಾರೆ. ಆದರೆ ಹೆದ್ದಾರಿ ಪ್ರಾಧಿಕಾರದ ಕಚೇರಿ ಎಲ್ಲಿದೆ? ಯಾರನ್ನು ಸಂಪರ್ಕಿಸಬೇಕೆಂಬುದನ್ನೂ ತಿಳಿಯದೇ ಸಣ್ಣ ಹಾಗೂ ಬಡ ಹಿಡುವಳಿದಾರರು ಅತ್ತ ಕೃಷಿ ಚಟುವಟಿಕೆಯನ್ನೂ ಮಾಡದೇ, ಇತ್ತ ಗೊಂದವನ್ನೂ ಪರಿಹರಿಸಿಕೊಳ್ಳದೇ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಒಟ್ಟಾರೆ ಚಿಕ್ಕಮಗಳೂರು-ಕಡೂರು ಹೆದ್ದಾರಿ ಅಭಿವೃದ್ಧಿ ಯೋಜನೆ ಈ ಭಾಗದ ರೈತರ ಕೃಷಿಚಟುವಟಿಕೆಗಳಿಗೆ ತೊಡಕಾಗಿ ಪರಿಣಮಿಸಿದ್ದು, ಹೆದ್ದಾರಿ ಪಾಲಾಗುವ ಕೃಷಿ ಜಮೀನು ಸಂಬಂಧ ಸಂತ್ರಸ್ಥರು ತೀವ್ರ ಗೊಂದಲಕ್ಕೆ ಬಿದ್ದಿದ್ದು, ಇದುವರೆಗೂ ತೀವ್ರಬರಗಾಲದಿಂದ ಕೃಷಿಯಿಂದ ವಿಮುಖರಾಗಿದ್ದ ರೈತರು, ಇದೀಗ ಹೆದ್ದಾರಿ ಯೋಜನೆಯೆಂಬ ಕಾನೂನಿನ ತೊಡಕಿನಿಂದಾಗಿ ಬೇಸಾಯ ಮಾಡಲು ಹಿಂದುಮುಂದು ನೋಡುವಂತಾಗಿದೆ. ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ರೈತರ ಈ ಗೊಂದಲ ನಿವಾರಣೆ ನಿಟ್ಟಿನಲ್ಲಿ ತುರ್ತು ಕ್ರಮವಹಿಸಿ ಗೊಂದಲ ನಿವಾರಣೆ ಮಾಡಬೇಕಿರುವುದು ಅತ್ಯಗತ್ಯವಾಗಿದೆ.
ಕಡೂರು-ಚಿಕ್ಕಮಗಳೂರು ನಡುವಿನ 40 ಕಿಮೀ ಎನ್‍ಎಚ್-173 ರಸ್ತೆಯನ್ನು ಅಗಲೀಕರಣ ಮಾಡಿ ಮೇಲ್ದರ್ಜೆಗೇರಿಸುವ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ರಸ್ತೆ ಹಾದು ಹೋಗಿರುವ ಹಿರೇಗೌಜ ಗ್ರಾಮದಲ್ಲಿ ತನ್ನ ಕುಟುಂಬಕ್ಕೆ ಸೇರಿದ ಜಮೀನು ಹೆದ್ದಾರಿಗೆ ಹೊಂದಿಕೊಂಡೇ ಇದೆ. ರಸ್ತೆ ಅಗಲೀಕರಣದ ವೇಳೆ ಎಷ್ಟು ಅಡಿ ಜಮೀನು ಹೆದ್ದಾರಿಗೆ ಸೇರಲಿದೆ ಎಂಬುದು ನನಗಾಗಲೀ, ನನ್ನ ಕುಟುಂಬದವರಿಗಾಗಲೀ ತಿಳಿದಿಲ್ಲ. ಈ ಬಗ್ಗೆ ಸರ್ವೆ ಮಾಡಲೂ ಯಾರೂ ಜಮೀನಿನ ಬಳಿ ಸುಳಿದಿಲ್ಲ. ಸರಕಾರದಿಂದ ಯಾವ ನೋಟಿಸ್ ಕೂಡ ಬಂದಿಲ್ಲ. ಸದ್ಯ ಮಳೆ ಸುರಿದಿದ್ದು, ಜಮೀನಿನಲ್ಲಿ ಕೃಷಿ ಮಾಡಿದರೆ ಎಲ್ಲಿ ಬೆಳೆದ ಬೆಳೆ ಹೆದ್ದಾರಿ ಪಾಲಾಗಲಿದೆಯೋ ಎಂಬ ಭೀತಿ ಇದೆ. ನನ್ನ ಜಮೀನು ಪಕ್ಕದಲ್ಲಿರುವ ರೈತರ ಪಾಡು ಇದುವೇ ಆಗಿದೆ. ಯಾರನ್ನು ಸಂಪರ್ಕಿಸುವುದೆಂಬುದೂ ಇಲ್ಲಿನ ರೈತರಿಗೆ ತಿಳಿದಿಲ್ಲ.
- ಶಿವಕುಮಾರ್, ಕಡೂರು-ಚಿಕ್ಕಮಗಳೂರು ಹೆದ್ದಾರಿ ಪಕ್ಕದ ಜಮೀನು ಮಾಲಕ, ಹಿರೇಗೌಜ ಗ್ರಾಮ
ಕಡೂರಿನಿಂದ ಚಿಕ್ಕಮಗಳೂರು ನಗರದ ಸೆರಾಯ್ ಹೊಟೇಲ್‍ವರೆಗೆ ಎನ್.ಎಚ್.173 ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸಿ.ಟಿ.ರವಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 294 ಕೋ. ರೂ. ಅನುದಾನ ನೀಡಿದೆ. ಈಗಾಗಲೇ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣ ಸಂಬಂಧದ ಎಲ್ಲ ಸರ್ವೇ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಗ್ಗೆ ಸಂತ್ರಸ್ಥ ರೈತರಿಗೂ ಮಾಹಿತಿ ನೀಡಲಾಗಿದೆ. ರೈತರಿಗೆ ಮಾಹಿತಿ ನೀಡದೇ ಕಾಮಗಾರಿ ನಡೆಸಲು ಸಾಧ್ಯವೇ?
- ವರಸಿದ್ದಿ ವೇಣುಗೋಪಾಲ್, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ