ಸರಕು ವಾಹನಗಳಲ್ಲಿ ಕಾರ್ಮಿಕರ ಸಾಗಾಟ ನಿಷೇಧ: ನಗರಕ್ಕೆ ಮಾತ್ರ ಸೀಮಿತವಾದ ಪೊಲೀಸ್ ಇಲಾಖೆ ಕ್ರಮ

Update: 2019-06-08 18:05 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜೂ.8: ಕಾಫಿನಾಡು ಭೌಗೋಳಿಕವಾಗಿ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳನ್ನೊಳಗೊಂಡ ಜಿಲ್ಲೆಯಾಗಿದೆ. ಕಾಫಿಯ ತವರೂರೆಂದೇ ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಕಾಫಿತೋಟಗಳಿದ್ದು, ಜಿಲ್ಲೆಯಲ್ಲಿ ಕಾಫಿ ಉದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕಾಫಿ ಉದ್ಯಮದ ವಿವಿಧ ಹಂತಗಳಲ್ಲಿ ಲಕ್ಷಾಂತರ ಕಾರ್ಮಿಕರನ್ನು ಬೇಡುವುದರಿಂದಾಗಿ ಉದ್ಯಮ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಿರುವುದು ಸುಳ್ಳಲ್ಲ. 

ಕಾಫಿ ಹಣ್ಣುಗಳ ಕಟಾವು ಸಂದರ್ಭಗಳಲ್ಲಿ ಪ್ರತೀ ವರ್ಷ ಜಿಲ್ಲೆಗೆ ಉದ್ಯೋಗ ಅರಸಿ ಹೊರಜಿಲ್ಲೆಗಳಿಂದ ಬರುವ ಸಾವಿರಾರು ಕಾರ್ಮಿಕರು ಒಂದೆಡೆಯಾದರೆ, ಜಿಲ್ಲೆಯ ಬರಪೀಡಿತ ತಾಲೂಕುಗಳಿಂದ ಮಲೆನಾಡು ಭಾಗದ ಕಾಫಿತೋಟಗಳಿಗೆ ಕೆಲಸ ಅರಸಿ ಬರುವವರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚುತ್ತಿದೆ. ಹೊರಜಿಲ್ಲೆಗಳಿಂದ ಕಾಫಿ ಹಣ್ಣುಗಳ ಕಟಾವು ಸಂದರ್ಭದಲ್ಲಿ ಬಂದ ಇಲ್ಲಿನ ಕಾಫಿ ಎಸ್ಟೇಟ್‍ಗಳಲ್ಲಿರುವ ಲೈನ್ ಮನೆಗಳಲ್ಲಿ ಆಶ್ರಯ ಪಡೆದು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಇಲ್ಲಿದ್ದು ಕಟಾವು ಮುಗಿದ ನಂತರ ತಮ್ಮ ಜಿಲ್ಲೆಗಳಿಗೆ ಹಿಂದಿರುಗುವುದು ವಾಡಿಕೆ. ಕಾಫಿ ತೋಟ, ಎಸ್ಟೇಟ್‍ಗಳ ಮಾಲಕರು ಕೃಷಿ, ಕೂಲಿ ಕೆಲಸಕ್ಕೆ ಸ್ಥಳೀಯ ಕಾರ್ಮಿಕರನ್ನು ಅವಲಂಭಿಸಿದ್ದರೆ, ಕಾಫಿ ಹಣ್ಣುಗಳ ಕಟಾವಿಗೆ ಸ್ಥಳೀಯರೊಂದಿಗೆ ಹೊರ ಜಿಲ್ಲೆಗಳ ಕಾರ್ಮಿಕರನ್ನು ಅವಲಂಭಿಸಿದ್ದಾರೆ. 

ಆದರೆ ಜಿಲ್ಲೆಯ ಬರಪೀಡಿತ ತಾಲೂಕುಗಳ ಕಾರ್ಮಿಕರೂ ಸೇರಿದಂತೆ ಸ್ಥಳೀಯ ಕಾರ್ಮಿಕರು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಯಲ್ಲಿರುವ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಸಾರಿಗೆ ಸಂಪರ್ಕಕ್ಕಾಗಿ ಸರಕು ಸಾಗಾಟ ವಾಹನಗಳಾದ ಟ್ರ್ಯಾಕ್ಟರ್, ಗೂಡ್ಸ್ ಆಟೊ, ಪಿಕಪ್‍ನಂತಹ ವಾಹನಗಳನ್ನೇ ಅವಲಂಬಿಸಿದ್ದುದು ಇದುವರೆಗಿನ ಪದ್ಧತಿಯಾಗಿತ್ತು. ಆದರೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡ ಹಾಕಿ ವಾಹನ ಮಾಲಕರು, ಚಾಲಕರಿಗೆ ದಂಡ ವಿಧಿಸುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ, ಎಚ್ಚರಿಕೆ ಮೀರಿಯೂ ಕಾರ್ಮಿಕರನ್ನು ಸಾಗಾಟ ಮಾಡುವ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಅಲ್ಲದೇ ಕಾಫಿ ತೋಟಗಳ ಮಾಲಕರು, ಕಾರ್ಮಿಕರನ್ನು ಪೂರೈಸುವ ಮೇಸ್ತ್ರಿಗಳ ಸಭೆ ನಡೆಸಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಈ ಕಾನೂನು ಕ್ರಮವನ್ನು ಪ್ರಶ್ನಿಸಿದರೆ ನ್ಯಾಯಾಲಯದ ಆದೇಶದಂತೆ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವಂತಿಲ್ಲ ಎಂಬ ಕಾನೂನು ಜಾರಿಯಲ್ಲಿದೆ ಎಂಬ ಉತ್ತರ ನೀಡಲಾಗುತ್ತಿದೆ.

ಅಸಲಿಗೆ ಮಂಡ್ಯದಲ್ಲಿ ಕಳೆದ ವರ್ಷ ನಡೆದ ಬಸ್ ದುರಂತ ಹಾಗೂ ಬಾಗಲಕೋಟೆಯಲ್ಲಿ ಸರಕು ಸಾಗಾಟ ವಾಹನದಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ನೂರಾರು ಮಂದಿ ಮೃತಪಟ್ಟ ಘಟನೆ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿದಾರರೊಬ್ಬರು ದಾವೆ ಹೂಡಿದ್ದು, ಈ ಪ್ರಕರಣ ಸಂಬಂಧ ನ್ಯಾಯಾಲಯ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ನಿಷೇಧಿಸಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸ್ ಇಲಾಖೆ ನ್ಯಾಯಾಲಯದ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ಮಾಡುವುದರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ.

ವಿಪರ್ಯಾಸವೆಂದರೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಪೊಲೀಸರು ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ಮಾಡುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಎಂದಿನಂತೆ ಸರಕು ಸಾಗಾಟ ವಾಹನಗಳಲ್ಲಿ ಗ್ರಾಮೀಣ ಭಾಗದ ಪೊಲೀಸ್ ಠಾಣೆಗಳ ಎದುರೇ ಕಾರ್ಮಿಕರನ್ನು ಸಾಗಾಟ ಮಾಡುವ ಪದ್ಧತಿ ಹಾಡುಹಗಲೇ ರಾಜಾರೋಷವಾಗಿ ನಡೆಯುತ್ತಿದೆ. ಆದರೂ ಸ್ಥಳೀಯ ಪೊಲೀಸರು ಇಂತಹ ವಾಹನಗಳ ಮಾಲಕರು, ಚಾಲಕರ ವಿರುದ್ಧ ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪ ಕೂಲಿ ಕಾರ್ಮಿಕ ಸಂಘಟನೆಗಳ ಮುಖಂಡರಿಂದ ಇದೀಗ ಕೇಳಿ ಬರುತ್ತಿದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ ಭಾಗದಲ್ಲಿ ಇಂದಿಗೂ ಸರಕು ಸಾಗಾಟ ವಾಹನಗಳಾದ ಲಾರಿ, ಟ್ರ್ಯಾಕ್ಟರ್, ಗೂಡ್ಸ್ ಆಟೊಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲದ ವೇಳೆ ಕಾರ್ಮಿಕರನ್ನು ಕಾಫಿ ತೋಟಗಳಿಗೆ ಸಾಗಿಸುವ ಹಿಂದಿರುಗಿ ಗ್ರಾಮಗಳಿಗೆ ತಂದು ಬಿಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯಾಲಯದ ಆದೇಶಕ್ಕೆ ಗ್ರಾಮೀಣ ಭಾಗದಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯ ಅಸಮರ್ಪಕ ಕಾರ್ಯವೈಖರಿಯೇ ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ.

ನಗರಕ್ಕೊಂದು ಕಾನೂನು, ಗ್ರಾಮೀಣ ಭಾಗಕ್ಕೊಂದು ಕಾನೂನು?
ನಗರ ಪ್ರದೇಶ ವ್ಯಾಪ್ತಿಯಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟ ಮಾಡುವ ವಾಹನಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತಿರುವ ಪೊಲೀಸರು ಗ್ರಾಮೀಣ ಭಾಗಗಳಲ್ಲಿನ ಇಂತಹ ವಾಹನಗಳ ಮೇಲೆ ಏಕೆ ಕಾನೂನು ಕ್ರಮಕೈಗೊಳ್ಳುತ್ತಿಲ್ಲ? ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕ ಸಾಗಾಟ ಕಾನೂನು ಜಾರಿ ವೇಳೆ ನ್ಯಾಯಾಲಯ ನಗರಕ್ಕೊಂದು ಕಾನೂನು, ಗ್ರಾಮೀಣ ಭಾಗಕ್ಕೊಂದು ಕಾನೂನು ಮಾಡಿದೆಯಾ? ನ್ಯಾಯಾಲಯದ ಕಾನೂನನ್ನು ಇಡೀ ಜಿಲ್ಲೆಯಲ್ಲಿ ಜಾರಿ ಮಾಡಬೇಕಾದ ಪೊಲೀಸ್ ಇಲಾಖೆ ಕೇವಲ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರ ಕಾನೂನು ಜಾರಿಗೆ ಮುಂದಾಗಿರುವುದಾದರೂ ಏಕೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೂಲಿ ಕಾರ್ಮಿಕರ ಸಂಘಟನೆಗಳು ಎತ್ತುತ್ತಿದ್ದು, ಈ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯೇ ಸ್ಪಷ್ಟನೆ ನೀಡಬೇಕಿದೆ.

ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನರಾಗ: ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿರುವುದನ್ನು ಜಿಲ್ಲೆಯ ಕೆಲ ಕಾರ್ಮಿಕ ಸಂಘಟನೆಗಳು ಸ್ವಾಗತಿಸಿವೆ. ಜಿಲ್ಲೆಯ ಕಾಫಿ ಬೆಳೆಗಾರರ ಸಂಘವೂ ಪೊಲೀಸರ ಈ ಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಜಿಲ್ಲಾ ಕೃಷಿ ಮತ್ತು ಕೂಲಿ ಕಾರ್ಮಿಕರ ಸಂಘಟನೆ ಮಾತ್ರ ಈ ಕಾನೂನು ಜಾರಿಯಿಂದಾಗಿ ಲಕ್ಷಾಂತರ ಕೂಲಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದು, ಕಾನೂನಿಗೆ ಮಾರ್ಪಾಡು ತರುವ ಮೂಲಕ ಕಾರ್ಮಿಕರನ್ನು ಸಾಗಾಟ ಮಾಡುವ ನಿರ್ದಿಷ್ಟ ವಾಹನಗಳಿಗೆ ಪರವಾನಿಗೆ ನೀಡಬೇಕೆಂದು ಇತ್ತೀಚೆಗೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೂ ಸಂಘ ಮನವಿ ಮಾಡಿದೆ. ಜಿಲ್ಲೆಯ ಕಾಫಿ ಉದ್ಯಮದ ಉಳಿವಿಗೆ ಕಾರ್ಮಿಕರು ಅತ್ಯಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಉದ್ಯಮ ಬೇಡಿದಷ್ಟು ಕಾರ್ಮಿಕರನ್ನು ಪೂರೈಕೆ ಮಾಡಲು ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ನಿಷೇದ ಕಾನೂನು ಜಾರಿ ಸಂಬಂಧ ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನರಾಗ, ಪರ ವಿರೋಧ ಇರುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾದರೂ ಹೇಗೆಂಬ ಪ್ರಶ್ನೆಯೂ ತಲೆದೋರಿದೆ.

ಒಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕಾಫಿ ಉದ್ಯಮ ಹಾಗೂ ಇದನ್ನೇ ಆಶ್ರಯಿಸಿರುವ ಕೃಷಿ ಕೂಲಿ ಕಾರ್ಮಿಕರು ನ್ಯಾಯಾಲಯದ ಆದೇಶದಿಂದಾಗಿ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಈ ನಡುವೆ ಕಾರ್ಮಿಕರ ಸಾಗಾಟ ನಿಷೇದ ಕಾನೂನು ಇಂತಹ ಕಾರ್ಮಿಕರ ಪಾಲಿಗೆ ಮರಣ ಶಾಸನದಂತಾಗಿದೆ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಕಾಫಿ ಉದ್ಯಮ ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ನಿಷೇದ ಕಾನೂನಿಗೆ ಅಗತ್ಯ ಮಾರ್ಪಾಡುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರಕಾರ ಚಿಂತನೆ ಮಾಡಬೇಕಿರುವುದು ಅತ್ಯಗತ್ಯವಾಗಿದೆ.

ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ನಿಷೇದ ಕಾನೂನು ಜಾರಿಗೆ ನಮ್ಮ ವಿರೋಧವಿಲ್ಲ. ಆದರೆ ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಕೈಗೊಳ್ಳದೇ ಪೊಲೀಸ್ ಇಲಾಖೆ ಕಾರ್ಮಿಕರ ಸಾಗಾಟ ಮಾಡುವ ವಾಹನಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದರಿಂದ ಜಿಲ್ಲೆಯ ಲಕ್ಷಾಂತರ ಕೃಷಿ, ಕೂಲಿ ಕಾರ್ಮಿಕರ ಬದುಕನ್ನು ಸಂಕಷ್ಟಕ್ಕೆ ಸಿಲುಕಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿರುವ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಹೋಗಲು ವಾಹನಗಳಿಲ್ಲದೇ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಮಳೆ ಬೆಳೆ ಇಲ್ಲದೆ ಕೂಲಿ ಕಾರ್ಮಿಕರಾಗಿರುವ ಬರಪೀಡಿತ ಪ್ರದೇಶಗಳ ರೈತರು, ಕಾರ್ಮಿಕರ ಪಾಲಿಗಂತೂ ಈ ಕಾನೂನು ಬರದ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟಗೆ ಈ ಹಿಂದಿನ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವಿತ್ತು. ಇದೀಗ ನ್ಯಾಯಾಲಯದ ಆದೇಶದಿಂದಾಗಿ ಮತ್ತೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಕಾಫಿ ಉದ್ಯಮದ ಉಳಿವಿಗಾಗಿ ಹಾಗೂ ಕಾರ್ಮಿಕರ ಬದುಕಿಗಾಗಿ ನ್ಯಾಯಾಲಯದ ಈ ಆದೇಶಕ್ಕೆ ಅಗತ್ಯ ಕಾನೂನು ಮಾರ್ಪಾಡು ಮಾಡಿ ಸರಕಾರ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು.
- ವಿಜಯ್‍ಕುಮಾರ್, ಸಂಚಾಲಕ, ಜಿಲ್ಲಾ ಕೃಷಿ ಕೂಲಿ ಕಾರ್ಮಿಕ ಸಂಘ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News