ಮೋದಿ ಅಲೆಯನ್ನು ಧೂಳೀಪಟಗೈದ ದೇಶದ ಅತ್ಯಂತ ಕಿರಿಯ ಸಂಸದೆ ಚಂದ್ರಾಣಿ ಮುರ್ಮು
ತನ್ನ 25ನೆ ವಯಸ್ಸಿನಲ್ಲೇ ಸಂಸದೆಯಾಗುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬುಡಕಟ್ಟು ಮಹಿಳೆ ಚಂದ್ರಾಣಿ ಮುರ್ಮು ಇತಿಹಾಸ ನಿರ್ಮಿಸಿದವರು. ಈ ಮೂಲಕ ಅವರು ದೇಶದ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಚಂದ್ರಾಣಿ ತಾನು ರಾಜಕೀಯ ಪ್ರವೇಶಿಸುತ್ತೇನೆ ಎನ್ನುವುದನ್ನು ಕನಸಿನಲ್ಲೂ ಎಣಿಸಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಎಲ್ಲರಂತೆ ಉದ್ಯೋಗದ ಹುಡುಕಾಟದಲ್ಲಿ ತೊಡಗಿದ್ದಾಗಲೇ ನವೀನ್ ಪಟ್ನಾಯಕ್ ರ ಬಿಜೆಡಿಯ ಟಿಕೆಟ್ ದೊರಕಿತ್ತು. ಆದರೆ ಆಕೆಯ ಸವಾಲು ಆಗಷ್ಟೇ ಆರಂಭವಾಗಿತ್ತು.
ಟಿಕಾರ್ಗುಮುರ ಗ್ರಾಮದವರಾದ ಚಂದ್ರಾಣಿಯವರ ತಂದೆ ಸರಕಾರಿ ಉದ್ಯೋಗಿ. ಇವರ ತಂದೆಯ ಹೆಸರು ಸಂಜೀವ್ ಮುರ್ಮು, ತಾಯಿ ಊರ್ವಶಿ ಸೋರೆನ್.
ಲೋಕಸಭಾ ಚುನಾವಣೆಯಲ್ಲಿ ಯಾರೂ ಊಹಿಸಿರದ ಫಲಿತಾಂಶಕ್ಕೆ ಇವರು ಸ್ಪರ್ಧಿಸಿದ್ದ ಕಿಯೊಂಝಾರ್ ಸಾಕ್ಷಿಯಾಗಿತ್ತು. ಮೋದಿಯ ಅಲೆಯ ಹೊರತಾಗಿಯೂ 2 ಬಾರಿಯ ಬಿಜೆಪಿ ಸಂಸದ ಅನಂತ ನಾಯಕ್ ರನ್ನು ಚಂದ್ರಾಣಿ 67,882 ಮತಗಳಿಂದ ಮಣಿಸಿದರು. ಬಿಜೆಪಿಯ ನಾಯಕ್ 2004 ಮತ್ತು 1999ರಲ್ಲಿ ಕಿಯೋಂಝಾರ್ ನಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದರು. 2019ರಲ್ಲಿ ಮೋದಿ ಅಲೆಯ ಕಾರಣ ಬಿಜೆಪಿಯ ಗೆಲುವು ಬಹುತೇಕ ಖಚಿತ ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.
“ನನ್ನ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ನಾನು ಉದ್ಯೋಗವನ್ನು ಹುಡುಕುತ್ತಿದ್ದೆ. ನಾನು ರಾಜಕೀಯ ಪ್ರವೇಶಿಸುತ್ತೇನೆಂದು ಎಂದೂ ಅಂದುಕೊಂಡಿಲ್ಲ. ನನ್ನ ನಾಮಪತ್ರವು ಅನಿರೀಕ್ಷಿತ” ಎಂದವರು ಹೇಳಿದರು.
ಮಾನಹಾನಿಗೆ ನಡೆದಿತ್ತು ನಿರಂತರ ಪ್ರಯತ್ನ
ಬಿಜೆಡಿಯಿಂದ ಟಿಕೆಟ್ ಸಿಕ್ಕ ಮಾತ್ರಕ್ಕೆ ಚಂದ್ರಾಣಿಯವರ ರಾಜಕೀಯ ಪ್ರವೇಶ ಸಲೀಸಾಗಿ ಇರಲಿಲ್ಲ. ಅದಾಗಲೇ ರಾಜಕೀಯ ವಿರೋಧಿಗಳು ಹಲವು ಬಗೆಯಲ್ಲಿ ಆಕೆಯ ಮಾನಹಾನಿಗೆ ಯತ್ನಿಸಿದ್ದರು. ಚಂದ್ರಾಣಿಯವರನ್ನು ಅಶ್ಲೀಲವಾಗಿ ಚಿತ್ರಿಸಿ ತಿರುಚಿದ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕೃತ್ಯಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಚಂದ್ರಾಣಿಯವರ ತಾಯಿಯ ತಂದೆಯ ಹೆಸರು ಹರಿಹರನ್ ಸೋರೆನ್. ಇವರು 1982 ಮತ್ತು 1984ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 2 ಬಾರಿ ಸಂಸದರಾಗಿದ್ದರು.
ತನ್ನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದೇ ತನ್ನ ಪ್ರಮುಖ ಗುರಿಯಾಗಿದೆ. ಸಂಪನ್ಮೂಲಗಳು ಹೆಚ್ಚಿರುವ ಕಿಯೋಂಝಾರ್ ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಿರುವುದು ನಿಜಕ್ಕೂ ದುರದೃಷ್ಟಕರ. ರಾಜ್ಯದ ಯುವಜನತೆ ಮತ್ತು ಮಹಿಳೆಯರನ್ನು ತಾನು ಕೇಂದ್ರದಲ್ಲಿ ಪ್ರತಿನಿಧಿಸುತ್ತೇನೆ ಎಂದು ಹೇಳುತ್ತಾರೆ ಚಂದ್ರಾಣಿ ಮುರ್ಮು.