ವಿಷಾನಿಲ ಸೋರಿಕೆಯಾದರೆ ಪಾರಾಗುವುದು ಹೇಗೆ?

Update: 2020-05-07 15:14 GMT

ಕೈಗಾರಿಕಾ ಸ್ಥಾವರ ಅಥವಾ ಕೆಮಿಕಲ್ ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾದಾಗ ಅದನ್ನು ಸೇವಿಸಿದರೆ, ವಿಷಾನಿಲ ಗಾಳಿಯ ಜೊತೆ ಬೆರೆತರೆ ಮನುಷ್ಯರ ಪ್ರಾಣಕ್ಕೆ ಕುತ್ತಾಗಬಹುದು. ಆದರೆ ಇಂತಹ ಅಪಾಯಗಳ ಸಂದರ್ಭ ಕೆಲವು ಎಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಅಪಾಯಗಳಿಂದ ಪಾರಾಗಬಹುದು.

ವಿಷಾನಿಲ ಸೋರಿಕೆಯಾದರೆ ಏನು ಮಾಡಬೇಕು?

ಒಂದು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದಾಗ ತುರ್ತು ಸೈರನ್ ಅಥವಾ ಎಮರ್ಜೆನ್ಸಿ ಸೈರನ್ ಗಳು ಶಬ್ಧ ಮಾಡುತ್ತದೆ ಮತ್ತು ಧ್ವನಿವರ್ಧಕಗಳ ಮೂಲಕ ಅಪಾಯದ ಬಗ್ಗೆ ಎಚ್ಚರಿಸಲಾಗುತ್ತದೆ. ಈ ಸಂದರ್ಭ ಕಾರ್ಖಾನೆಯಲ್ಲಿರುವವರು, ಆಸುಪಾಸಿನಲ್ಲಿರುವವರು ಮೊತ್ತ ಮೊದಲು ಮಾಡಬೇಕಾದ ಕೆಲಸ ಆತಂಕಕ್ಕೊಳಗಾಗದೆ ಇರುವುದು ಮತ್ತು ಮತ್ತು ಗಾಳಿಯು ಚಲಿಸುವ ದಾರಿಯನ್ನು ತಿಳಿದುಕೊಳ್ಳುವುದು. ಗಾಳಿಯ ಚಲನೆಯ ದಿಕ್ಕಿಗೆ ವಿರುದ್ಧ ಅಥವಾ ಎಡ-ಬಲ ದಿಕ್ಕುಗಳಿಗೆ ನಾವು ಚಲಿಸಿದರೆ ಸಂಭಾವ್ಯ ಅಪಾಯವನ್ನು ಸಾಧ್ಯವಾದಷ್ಟರ ಮಟ್ಟಿಗೆ ತಪ್ಪಿಸಬಹುದು.  ಯಾವುದೇ ಕಾರಣಕ್ಕೂ ಗಾಳಿ ಚಲಿಸುವ ದಿಕ್ಕಿನತ್ತ ಹೋಗಲೇಬಾರದು. ಯಾಕೆಂದರೆ ಹೆಚ್ಚಿನ ರಾಸಾಯನಿಕ ಅನಿಲ ಗಾಳಿಯೊಂದಿಗೆ ಬೆರೆತು ಅದರೊಂದಿಗೆ ಚಲಿಸುತ್ತಿರುತ್ತದೆ. ಇದನ್ನು ನಾವು ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗಾಳಿಯು ಯಾವ ದಿಕ್ಕಿಗೆ ಚಲಿಸುತ್ತಿದೆ ಎಂದು ತಿಳಿಯುವುದು ಹೇಗೆ?

ಗಾಳಿಯ ಚಲನೆಯ ದಿಕ್ಕನ್ನು ತಿಳಿಯಲು ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಕಾರ್ಖಾನೆ ಪ್ರದೇಶಗಳಲ್ಲಿರುವ ಬಾವುಟಗಳನ್ನು ಗಮನಿಸಿ, ಅಥವಾ ನಿಮ್ಮ ಬಳಿಯಿರುವ ಬಟ್ಟೆ, ಕಾಗದದ ತುಂಡನ್ನು ಗಾಳಿಗೆ ಹಿಡಿದರೆ ಸಾಕು. ಯಾವ ದಿಕ್ಕಿನಲ್ಲಿ ಗಾಳಿ ಚಲಿಸುತ್ತಿದೆಯೋ ಅದೇ ದಿಕ್ಕಿನತ್ತ ನೀವು ಹಿಡಿದ ಬಟ್ಟೆ ಅಥವಾ ಕಾಗದವೂ ತಿರುಗುತ್ತದೆ.  ಇದ್ಯಾವುದು ಇಲ್ಲದ ಸಂದರ್ಭದಲ್ಲಿ ನಿಮ್ಮಲ್ಲಿರುವ ಕರ್ಚೀಫನ್ನು ಕೈಯಲ್ಲಿ ಎತ್ತಿ ಹಿಡಿಯಬಹುದು ಅಥವಾ ನೆಲದಲ್ಲಿದ್ದ ಮಣ್ಣು, ಮರಳನ್ನು ಮುಷ್ಟಿಯಲ್ಲಿ ತೆಗೆದು ಗಾಳಿಗೆ ತೂರಿಬಿಡಬಹುದು. ಟಿಶ್ಯು ಪೇಪರ್, ಹತ್ತಿ ತುಂಡು ಅಥವಾ ಯಾವುದೇ ಹಗುರ ವಸ್ತು ಅಂದರೆ ಗಾಳಿಯಲ್ಲಿ ತೇಲುವ ಯಾವುದೇ ವಸ್ತುವನ್ನು ಗಾಳಿಯ ದಿಕ್ಕು ಅರಿಯಲು ಬಳಸಬಹುದು.

ನೀವು ಮಾಡಿದ ಯಾವ ಉಪಾಯವು ಕೆಲಸ ಮಾಡಿಲ್ಲ ಅಂದರೆ ಅಲ್ಲಿ ಗಾಳಿ ವೇಗವಾಗಿ ಬೀಸುತ್ತಿಲ್ಲ ಎಂದರ್ಥ. ಉದಾಹರಣೆಗೆ ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸುತ್ತಿದೆ. ನಿಮ್ಮ ಹತ್ತಿರದ ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾಯಿತು ಆಗ ನೀವು ಕಾರ್ಖಾನೆಯ ಮದ್ಯ ಭಾಗದಲ್ಲಿ ಅಥವಾ ಪೂರ್ವ ಭಾಗದಲ್ಲಿ ಇದ್ದರೆ  (ಕಾರ್ಖಾನೆಯ ಹೊರಗೆ ಅಥವಾ ಒಳಗೆ) ಮೊದಲು ದಕ್ಷಿಣ ಅಥವಾ ಉತ್ತರ ದಿಕ್ಕಿನತ್ತ ( ಯಾವುದು ಹತ್ತಿರ ಮತ್ತು ಸುರಕ್ಷಿತ ಆ ಕಡೆಗೆ) ನೂರು, ಇನ್ನೂರು ಮೀಟರ್ ದೂರ ಹೋಗಿ ನಂತರ ಪಶ್ಚಿಮಕ್ಕೆ (ಗಾಳಿ ಬರುವ ದಿಕ್ಕಿಗೆ) ಹೋಗಬೇಕು. ಆಗ ಅಲ್ಲಿಂದ ಬೀಸುವ ಶುದ್ಧ ಗಾಳಿ ನಿಮಗೆ ಸಿಗುತ್ತದೆ,

ಒಂದು ವೇಳೆ ನೀವು ಕಾರ್ಖಾನೆ ಘಟಕದ ಪಶ್ಚಿಮಕ್ಕೆ ಇದ್ದು ಪೂರ್ವಕ್ಕೆ ಕಾರ್ಖಾನೆ ಘಟಕ ಇದ್ದರೆ ಭಯಪಡುವ ಅಗತ್ಯವಿಲ್ಲ. ಸಾಧ್ಯವಾದಷ್ಟು ಪಶ್ಚಿಮಕ್ಕೆ ಚಲಿಸಿ ನಂತರ ಉತ್ತರ ಅಥವಾ ದಕ್ಷಿಣ ದಿಕ್ಕಿನತ್ತ ಸುರಕ್ಷಿತವಾಗಿ ಸಾಗಬಹುದು. ಹೀಗೆ ಗಾಳಿಯ ವಿರುದ್ಧ ಅಥವಾ ಎಡ-ಬಲ ದಿಕ್ಕುಗಳಲ್ಲಿ ಯಾವುದು ಸುರಕ್ಷಿತ ಎನ್ನುವುದನ್ನು ನಿರ್ಧರಿಸಿ ನೀವು ಸುರಕ್ಷಿತವಾಗಿ ಅತ್ತ ಸಾಗಬೇಕು.

ಗಾಳಿ ಜೋರಾಗಿ ಬೀಸದಿದ್ದರೆ ?

ಗಾಳಿ ಬೀಸುತ್ತಿಲ್ಲ, ಇದೇ ಸಂದರ್ಭ ಅನಿಲ ಸೋರಿಕೆಯಾಗಿದೆ. ಆಗ ನಿಮ್ಮ ಎಲ್ಲಾ ಕೆಲಸ ಬಿಟ್ಟು ಆದಷ್ಟು ಬೇಗ ಕಾರ್ಖಾನೆಯಿಂದ ಹತ್ತಿರದ ಯಾವುದೇ ಸುರಕ್ಷಿತ ದಿಕ್ಕಿನತ್ತ ಹೋಗಬೇಕು. ಆದಷ್ಟು ತಗ್ಗು ಪ್ರದೇಶಕ್ಕೆ ಹೋಗದಿರುವುದು ಒಳಿತು. ಕೆಲವೊಂದು ರಾಸಾಯನಿಕ ಅನಿಲ ಆಮ್ಲಜನಕಕ್ಕಿಂತ ಭಾರವಾಗಿದ್ದರೆ, ಅಂತಹ ಅನಿಲ ತಗ್ಗು ಪ್ರದೇಶಗಳಲ್ಲಿ ಶೇಖರಣೆಗೊಳ್ಳುತ್ತದೆ.

ಸಾಧಾರಣವಾಗಿ ಇಂತಹ ಕೆಮಿಕಲ್ ಪ್ಲಾಂಟ್ ಅಥವಾ ಘಟಕದ ಒಳಗಡೆ ಕೆಲಸ ಮಾಡುವ ಕಾರ್ಮಿಕರಿಗೆ ಅಲ್ಲಿಂದ ತುರ್ತುಪರಿಸ್ಥಿತಿಯಲ್ಲಿ ಏನು ಮಾಡಬೇಕು ಮತ್ತು ಹೇಗೆ ಹೊರಗೆ ಹೋಗಬೇಕು ಎಂದು ತರಬೇತಿ ನೀಡಿರುತ್ತಾರೆ.

ಯಾವುದೇ ಕಾರಣಕ್ಕೂ ಇಂತಹ ಸಂದರ್ಭಗಳಲ್ಲಿ ಹೆದರಿಕೆಯಿಂದ ಓಡಲೇಬಾರದು. ಯಾಕೆಂದರೆ ಓಡಿದಾಗ ದೀರ್ಘ ಶ್ವಾಸ ತೆಗೆದುಕೊಳ್ಳಬೇಕಾಗುತ್ತದೆ. ಆಗ ಹೆಚ್ಚಿನ ಗಾಳಿ ದೇಹದೊಳಗೆ ಸೇರುವಾಗ ಹೆಚ್ಚಿನ ಪ್ರಮಾಣದ ವಿಷಾನಿಲ ದೇಹ ಸೇರಿ ಅಸ್ವಸ್ಥರಾಗಬಹುದು ಮತ್ತು ಇದು ಜೀವಕ್ಕೂ ಕುತ್ತು ತರಬಹುದು.

ಇಂತಹ ಸಂದರ್ಭಗಳಲ್ಲಿ ನೀವು ಸುರಕ್ಷಿತ ಪ್ರದೇಶಕ್ಕೆ ತೆರಳಿದ ನಂತರ ಅಗ್ನಿ ಶಾಮಕ ದಳ, ಪೊಲೀಸರಿಗೆ ಕೂಡಲೇ ಮಾಹಿತಿ ನೀಡಲು ಮರೆಯದಿರಿ.

ಇನ್ನೊಂದು ಪ್ರಮುಖ ವಿಚಾರವೆಂದರೆ ಒಂದು ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾದರೆ ಯಾವುದೇ ಕಾರಣಕ್ಕೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಅಡುಗೆಗೆ, ತಂಬಾಕು ಸೇವನೆಗೆ ಬೆಂಕಿ ಹಚ್ಚಲೇಬೇಡಿ. ಒಂದು ವೇಳೆ ಒಲೆ ಉರಿಯುತ್ತಿದರೆ ಕೂಡಲೇ ಆರಿಸಿಬಿಡಿ. ಕಾರ್ಖಾನೆಗೆ ಬೆಂಕಿ ಬಿದ್ದಾಗಲೂ ಇದೇ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ಸಂಭಾವ್ಯ ಅಪಾಯವನ್ನು ಸಾಧ್ಯವಾದಷ್ಟು ತಪ್ಪಿಸಬಹುದು.

-ಅಲ್ ಅಮೀನ್, ಕಡೇಶಿವಾಲಯ.

(Safety officer)

Writer - -ಅಲ್ ಅಮೀನ್, ಕಡೇಶಿವಾಲಯ.

contributor

Editor - -ಅಲ್ ಅಮೀನ್, ಕಡೇಶಿವಾಲಯ.

contributor

Similar News