30 ಸಾವಿರ ಮತಗಳಿಂದ 6.9 ಲಕ್ಷ ಮತಗಳವರೆಗೆ: ಲೆಕ್ಕಾಚಾರಗಳನ್ನೇ ಮಣಿಸಿದ ಜ್ಯೋತಿಮಣಿ
2014ರ ಚುನಾವಣೆಯಲ್ಲಿ ಇವರು ಗಳಿಸಿದ್ದು ಕೇವಲ 30 ಸಾವಿರ ಮತಗಳನ್ನು. 2019ರ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಹಣಬಲದ ಸವಾಲು ಮಾತ್ರವಲ್ಲ, ಪಕ್ಷದೊಳಗಿನ ಒಡಕು ಕೂಡ ಸವಾಲಾಯಿತು. ಎಐಎಡಿಎಂಕೆಯ ಪ್ರಭಾವಿ ನಾಯಕ , 4 ಬಾರಿಯ ಸಂಸದ ಎಂ. ತಂಬಿದುರೈಯವರನ್ನು ಮಣಿಸುವುದು ಕೇವಲ 30 ಸಾವಿರ ಮತಗಳನ್ನು ಗಳಿಸಿದ್ದ ಅಭ್ಯರ್ಥಿಗೆ ಕಷ್ಟಸಾಧ್ಯ ಎಂದೇ ರಾಜ್ಯ ರಾಜಕೀಯದಲ್ಲಿ ಪೂರ್ವನಿರ್ಧರಿತವಾಗಿತ್ತು. ಆದರೆ 4 ಲಕ್ಷ ಮತಗಳ ಅಂತರದಲ್ಲಿ ತಂಬಿದುರೈಯನ್ನು ಮಣಿಸಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು ಜ್ಯೋತಿಮಣಿ ಎಸ್.
ಕರೂರ್ ಲೋಕಸಭಾ ಕ್ಷೇತ್ರದ ಮೊದಲ ಮಹಿಳಾ ಸಂಸದೆಯಾಗಿರುವ ಜ್ಯೋತಿಮಣಿ ಕಾಂಗ್ರೆಸ್ ನಿಂದ ಕಣಕ್ಕಿಳಿದವರು. ಇಲ್ಲಿ ಎಐಎಡಿಎಂಕೆಯ ಪ್ರಭಾವಿ ಅಭ್ಯರ್ಥಿಯನ್ನು ಮಣಿಸುವಲ್ಲಿ ಡಿಎಂಕೆ ಕೂಡ ಕಾಂಗ್ರೆಸ್ ಗೆ ನೆರವಾಗಿತ್ತು. ರಾಹುಲ್ ಗಾಂಧಿಯವರೇ ಸ್ವತಃ ಆಯ್ಕೆ ಮಾಡಿದ ಅಭ್ಯರ್ಥಿಯಾಗಿದ್ದರು ಜ್ಯೋತಿಮಣಿ.
ಅಭ್ಯರ್ಥಿಯಾಗಿ ಘೋಷಣೆಯಾದ ಮಾತ್ರಕ್ಕೆ ಜ್ಯೋತಿಮಣಿಯವರ ಸ್ಪರ್ಧೆಯೇನೂ ಸುಲಭವಾಗಿರಲಿಲ್ಲ. ಪಕ್ಷದೊಳಗೇ ಜ್ಯೋತಿಮಣಿ ಅಭ್ಯರ್ಥಿತನದ ಬಗ್ಗೆ ಅಸಮಾಧಾನ ಮೂಡಿತ್ತು. ಪಕ್ಷದ ಹಲವು ನಾಯಕರು ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದರು. ಈ ಸಂದರ್ಭ ಆಕೆಯ ಚುನಾವಣಾ ಪ್ರಚಾರದ ಕಳೆ ಹೆಚ್ಚಿಸಿದ್ದು ಡಿಎಂಕೆ. ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೇ ಸ್ವತಃ ಜ್ಯೋತಿಮಣಿ ಪರ ಕರೂರಿನಲ್ಲಿ ಪ್ರಚಾರ ನಡೆಸಿದರು.
“ಈ ಬಾರಿಯ ಚುನಾವಣೆಯಲ್ಲಿ ಹಲವು ಅಂಶಗಳು ಕೆಲಸ ಮಾಡಿವೆ. ಈ ಬಾರಿ ಡಿಎಂಕೆ ನೇತೃತ್ವದ ಮೈತ್ರಿ ಬಗ್ಗೆ ಒಲವಿತ್ತು ಮತ್ತು ಮೋದಿ ವಿರೋಧಿ ಅಲೆಯಿತ್ತು. ರಾಜಕಾರಣಿಗಳು ಶ್ರೀಮಂತರಾಗಿದ್ದು, ಬಡವರ ಜೊತೆ ಬೆರೆಯುತ್ತಿಲ್ಲ ಎನ್ನುವುದನ್ನು ಜನರು ಮನಗಂಡಿದ್ದರು. ಸಾಧಾರಣ ಹಿನ್ನೆಲೆಯ ವ್ಯಕ್ತಿಯೊಬ್ಬರು ಅವರಿಗೆ ಬೇಕಾಗಿದ್ದರು. ನನ್ನ ಬಳಿ ಹಣವಿರಲಿಲ್ಲ, ಆದ್ದರಿಂದ ನನಗೆ ಟಿಕೆಟ್ ನೀಡಿ ಸೀಟು ವ್ಯರ್ಥ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆ ಪಕ್ಷದ ಒಳಗೂ, ಹೊರಗೂ ಕೇಳಿಬಂದಿತ್ತು. ಇದೇ ಪ್ರಶ್ನೆ ಮತದಾರರಿಗೆ ನಾಟಿತು ಎಂದು ನಾನು ಭಾವಿಸುತ್ತೇನೆ” ಎಂದವರು ತನ್ನ ಗೆಲುವಿನ ಬಗ್ಗೆ ವಿವರಿಸುತ್ತಾರೆ.
ಜ್ಯೋತಿಮಣಿಯವರನ್ನು ಕ್ಷೇತ್ರದ ಜನರು ತಮ್ಮ ಮನೆ ಮಗಳಂತೆಯೇ ಸ್ವೀಕರಿಸಿದರು. ತಮಿಳುನಾಡಿನಲ್ಲಿ ರಾಜಕೀಯ ಕ್ಷೇತ್ರದ ವಿವಾದಗಳು, ಭ್ರಷ್ಟಾಚಾರ, ಅದಕ್ಷತೆಯ ಬಗ್ಗೆ ಜನರು ಅದಾಗಲೇ ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣ ಫೇಸ್ ಬುಕ್, ಯುಟ್ಯೂಬ್, ವಾಟ್ಸ್ಯಾಪ್ ಗಳಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆಯೇ ನಮ್ಮ ಗೆಲುವು ಎಂದು ಜನಜಾಗೃತಿ ಮೂಡಿಸಲು ಆರಂಭಿಸಿದ್ದರು. ಜನರಿಗೂ ಹೊಸ ಮುಖವೊಂದರ, ಜನರ ಜೊತೆ ಬೆರೆಯುವ ಅಭ್ಯರ್ಥಿ ಬೇಕಾಗಿದ್ದು, ಜ್ಯೋತಿಮಣಿಯವರನ್ನು ಆರಿಸಿದರು.
“ತನ್ನ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ನನ್ನ ಮೊದಲ ಕೆಲಸ. 25 ವರ್ಷಗಳಿಂದ ಯಾವುದೇ ಅಭಿವೃದ್ಧಿ ನಡೆಯದ ಕ್ಷೇತ್ರದಲ್ಲಿ ನಾನಿದ್ದೇನೆ. 5 ವರ್ಷಗಳಲ್ಲಿ ನಾನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸುಶಿಕ್ಷಿತ ಜನರಿಗೆ ಉದ್ಯೋಗಗಳು ದೊರಕುತ್ತಿಲ್ಲ. ಇದಕ್ಕಾಗಿ ಕೌಶಲ್ಯ ಅಭಿವೃದ್ಧಿಯೋಜನೆಯೊಂದನ್ನು ಆರಂಭಿಸಲಿದ್ದೇವೆ” ಎಂದು ಜ್ಯೋತಿಮಣಿ ಹೇಳುತ್ತಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕರೂರಿಗೆ ತೆರಳಿದ ಜ್ಯೋತಿಮಣಿ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಣ್ಣ್… ಜ್ಯೋತಿಮಣಿ, ನಲ್ಲಾ ಇರ್ ಕ್ಕಿಯಾ? ಮಕ್ಕಳ್ ಕ್ಕ್ ನಲ್ಲದು ಪಣ್ಣಿಪೋಡು ಕಣ್ಣ್” (ಮಗಳೇ ಜ್ಯೋತಿಮಣಿ, ಚೆನ್ನಾಗಿದ್ದೀಯಾ?, ಜನರಿಗೆ ಒಳ್ಳೆಯದನ್ನು ಮಾಡು) ಎಂದು ಮಹಿಳೆಯರು ಹೇಳುವಾಗ, “ನಾನು ಮಾಡುತ್ತೇನೆ. ನೀವು ನನ್ನನ್ನು ನಂಬಿ ಮತ ನೀಡಿದ್ದೀರಿ” ಎಂದು ಜ್ಯೋತಿಮಣಿ ಹೇಳುತ್ತಾರೆ.
ರೈತನಾಗಿದ್ದ ತನ್ನ ತಂದೆಯನ್ನು ಜ್ಯೋತಿಮಣಿ 13 ವರ್ಷದವರಾಗಿದ್ದಾಗಲೇ ಕಳೆದುಕೊಂಡರು. ಪಂಚಾಯತ್ ವಾರ್ಡ್ ಕೌನ್ಸಿಲರ್ ಆಗಿ ಆರಂಭಗೊಂಡ ಜ್ಯೋತಿಮಣಿಯವರ ರಾಜಕೀಯ ಪ್ರಯಾಣ ಇಂದು ಅವರನ್ನು ಸಂಸತ್ ಪ್ರವೇಶಿಸುವಂತೆ ಮಾಡಿದೆ.
ಜ್ಯೋತಿಮಣಿಯವರು ಕೇವಲ ರಾಜಕಾರಣಿ ಮಾತ್ರವಲ್ಲ, ಲೇಖಕಿಯೂ ಹೌದು. 1996ರಲ್ಲಿ ತಮಿಳು ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಅವರ ಸಣ್ಣಕಥೆ ಅತ್ಯುತ್ತಮ ಸಣ್ಣ ಕಥೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆಯಿತು. ‘ನೀರ್ ಪಿರಕ್ಕುಂ ಮುನ್’ ಎಂಬ ಸಣ್ಣ ಕಥೆಯಲ್ಲಿ ದಲಿತ ಕಾಲನಿಗೆ ನೀರಿನ ಸಂಪರ್ಕ ಕಲ್ಪಿಸಿದ ಬಗ್ಗೆ ತನ್ನ ಅನುಭವಗಳನ್ನು ತೆರೆದಿಟ್ಟಿದ್ದರು.