ರೈಲ್ವೆ ಬಜೆಟ್: ಶಿವಮೊಗ್ಗದ ಯೋಜನೆಗಳಿಗೆ ಸಿಗಲಿದೆಯೇ ಒತ್ತು ?

Update: 2019-07-02 18:13 GMT
ರೈಲ್ವೆ ಬಜೆಟ್: ಶಿವಮೊಗ್ಗದ ಯೋಜನೆಗಳಿಗೆ ಸಿಗಲಿದೆಯೇ ಒತ್ತು ?
  • whatsapp icon

ಶಿವಮೊಗ್ಗ, ಜು. 2: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಪ್ರಥಮ ರೈಲ್ವೆ ಬಜೆಟ್ ಜು. 5 ರಂದು ಮಂಡನೆಯಾಗುತ್ತಿದೆ. ಈ ಬಜೆಟ್‍ನಲ್ಲಿ ಮಲೆನಾಡಿನ ಪ್ರಮುಖ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ಸಿಗಲಿದೆಯಾ? ಎಂಬ ನಿರೀಕ್ಷೆ ಈ ಭಾಗದ ನಾಗರಿಕರದ್ದಾಗಿದೆ.     

ಜಿಲ್ಲೆಗೆ ಸಂಬಂಧಿಸಿದ ಬಹುತೇಕ ಹೊಸ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗಳು, ಈ ಹಿಂದಿನ ರೈಲ್ವೆ ಬಜೆಟ್‍ಗಳಲ್ಲಿ ಈಗಾಗಲೇ ಪ್ರಸ್ತಾಪವಾಗಿವೆ. ಕೆಲ ಮಾರ್ಗಗಳ ನಿರ್ಮಾಣಕ್ಕೆ ಅನುಮತಿ ಲಭಿಸಿ, ಅನುದಾನ ಕೂಡ ಲಭ್ಯವಾಗಿದೆ. ಇನ್ನೂ ಕೆಲ ಮಾರ್ಗಗಳ ಸಮೀಕ್ಷೆಗೆ ಆದೇಶಿಸಲಾಗಿದೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸಂಪೂರ್ಣ ನೆನೆಗುದಿಗೆ ಬಿದ್ದಿದೆ. 

ಉಳಿದಂತೆ ಹೊಸ ರೈಲುಗಳ ಓಡಾಟ, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ಹೊಸ ರೈಲ್ವೆ ನಿಲ್ದಾಣ ಸ್ಥಾಪನೆ, ನಿಲ್ದಾಣಗಳ ಮೇಲ್ದರ್ಜೆಗೇರಿಸುವುದು, ದ್ವಿಪಥ ಮಾರ್ಗ ನಿರ್ಮಾಣ. ಗೂಡ್ಸ್ ರೈಲುಗಳ ನಿಲುಗಡೆಗೆ ಪ್ರತ್ಯೇಕ ಟರ್ಮಿನಲ್ ಸೇರಿದಂತೆ ರೈಲ್ವೆಗೆ ಸಂಬಂಧಿಸಿದ ಹಲವು ಪ್ರಸ್ತಾಪಗಳಿವೆ. ಹಾಲಿ ಬಜೆಟ್‍ನಲ್ಲಿ ಒತ್ತು ಸಿಗಲಿದೆಯಾ ಎಂಬುವುದನ್ನು ಕಾದು ನೋಡಬೇಕಾಗಿದೆ. ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವಿವರ ಈ ಮುಂದಿನಂತಿದೆ. 

ಮಾರ್ಗ: ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಶಿವಮೊಗ್ಗ-ಹರಿಹರ ನೂತನ ಮಾರ್ಗ ನಿರ್ಮಾಣ ಯೋಜನೆಗೆ, ಈಗಾಗಲೇ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಮಾರ್ಗ ಹಾದು ಹೋಗುವ ಸ್ಥಳಗಳ ಸಮೀಕ್ಷೆ ಪೂರ್ಣಗೊಂಡಿದೆ. ಹಳಿ ನಿರ್ಮಾಣಕ್ಕೆ ಅನುದಾನ ಕೂಡ ಬಿಡುಗಡೆಯಾಗಿದೆ. ಆದರೆ ಇಲ್ಲಿಯವರೆಗೂ ಮಾರ್ಗ ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಿಲ್ಲ. 

ಒಪ್ಪಂದದ ಪ್ರಕಾರ, ರಾಜ್ಯ ಸರ್ಕಾರ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಸ್ವಾದೀನ ಪಡಿಸಿಕೊಡಬೇಕು. ಆದರೆ ಇಲ್ಲಿಯವರೆಗೂ ಭೂ ಸ್ವಾದೀನವಾಗಿಲ್ಲ. ಇದರಿಂದ ಈ ಯೋಜನೆ ಸುಮಾರು ಒಂದು ದಶಕದಿಂದ ನೆನೆಗುದಿಯಲ್ಲಿದೆ. ಸದ್ಯಕ್ಕೆ ಟೇಕಾಫ್ ಆಗುವ ಲಕ್ಷಣಗಳಿಲ್ಲ. ಈ ಕಾರಣದಿಂದ ರೈಲ್ವೆ ಇಲಾಖೆಯೇ ಈ ಯೋಜನೆಯ ಸಂಪೂರ್ಣ ವೆಚ್ಚ ಭರಿಸಿ, ಅನುಷ್ಠಾನಗೊಳಿಸಲು ಮುಂದಾಗಬೇಕಾಗಿದೆ.

ರಾಜ್ಯದವರಾದ ಡಿ.ವಿ.ಸದಾನಂದಗೌಡ ರೈಲ್ವೆ ಸಚಿವರಾಗಿದ್ದ ವೇಳೆ ಮಂಡಿಸಿದ ಬಜೆಟ್‍ನಲ್ಲಿ, ಶಿವಮೊಗ್ಗ-ಮಂಗಳೂರು ನಡುವೆ ರೈಲ್ವೆ ಮಾರ್ಗ ನಿರ್ಮಾಣ ಪ್ರಸ್ತಾಪ ಮಾಡಿದ್ದರು. ಈ ಮಾರ್ಗದ ಸಮೀಕ್ಷೆಗೆ ಕ್ರಮಕೈಗೊಳ್ಳಲಾಗಿತ್ತು. ಹಾಲಿ ಬಜೆಟ್‍ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುಮತಿ ದೊರಕಬೇಕಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗ ಸಮೀಕ್ಷೆಗೆ ಕ್ರಮಕೈಗೊಳ್ಳಲಾಗಿದೆ. ಮಾರ್ಗ ನಿರ್ಮಾಣಕ್ಕೆ ಅನುಮತಿಯಿತ್ತು, ಅಗತ್ಯ ಅನುದಾನ ಬಿಡುಗಡೆ ಮಾಡಬೇಕಾಗಿದೆ. 

ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಾಣ, ಶಿವಮೊಗ್ಗ - ಬೀರೂರು ನಡುವೆ ದ್ವಿ ಪಥ ಮಾರ್ಗ ನಿರ್ಮಾಣ ಪ್ರಸ್ತಾಪ ಈ ಹಿಂದಿನ ಬಜೆಟ್‍ಗಳಲ್ಲಾಗಿದೆ. ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣದತ್ತ ಗಮನಹರಿಸಬೇಕಾಗಿದೆ. 

ಸಂಚಾರ: ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಚೆನ್ನೈ ನಡುವೆ ರೈಲು ಸಂಚಾರ ಬೇಡಿಕೆಯಿದೆ. ಸಂಸದ ಬಿ.ವೈ.ರಾಘವೇಂದ್ರ ಕೂಡ ರೈಲ್ವೆ ಇಲಾಖೆಗೆ ಈ ಬಗ್ಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ-ಬೆಂಗಳೂರು ನಡುವೆ ಶತಾಬ್ದಿ ರೈಲು ಸಂಚಾರ ಆರಂಭಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಲಾರಂಭಿಸಿದೆ. 
ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವುದು. ಹೊಸ ಫ್ಲ್ಯಾಟ್‍ಫಾರಂಗಳ ನಿರ್ಮಾಣ. ನಗರದ ಹೊರವಲಯದಲ್ಲಿ ಗೂಡ್ಸ್ ರೈಲುಗಳ ನಿಲುಗಡೆ ಪ್ರತ್ಯೇಕ ನಿಲ್ದಾಣ ಸ್ಥಾಪನೆ. ಕೋಟೆಗಂಗೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿ ಅಭಿವೃದ್ದಿಗೊಳಿಸುವ ಪ್ರಸ್ತಾಪ. 

ಸುಗಮ ವಾಹನ ಸಂಚಾರಕ್ಕಾಗಿ, ಶಿವಮೊಗ್ಗ ನಗರದ ಸವಳಂಗ ರಸ್ತೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರಮುಖ ರಸ್ತೆಗಳ ಬಳಿ ಹಾದು ಹೋಗಿರುವ ರೈಲ್ವೆ ಹಳಿಗಳ ಬಳಿ ಮೇಲ್ಸೇತುವೆ ಅಥವಾ ಅಂಡರ್‍ಪಾಸ್ ನಿರ್ಮಾಣ. ಒಟ್ಟಾರೆ ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ರೈಲ್ವೆ ಕ್ಷೇತ್ರದಲ್ಲಿ ಕೆಲ ಸುಧಾರಣೆಯಾಗಿದೆಯಾದರೂ, ಇನ್ನೂ ಹೆಚ್ಚಿನ ಅಭಿವೃದ್ದಿಯಾಗಬೇಕಾಗಿದೆ. ಹಲವು ವರ್ಷಗಳ ಬೇಡಿಕೆಗಳು ಕಾರ್ಯಗತಗೊಳ್ಳಬೇಕಾಗಿದೆ. ಈ ಕಾರಣದಿಂದ ಪ್ರಸ್ತುತ ಬಜೆಟ್‍ನತ್ತ ಕುತೂಹಲದ ಚಿತ್ತ ನೆಟ್ಟಿದೆ. 

ಪ್ರಮುಖ ಬೇಡಿಕೆಗಳು :

ಶಿವಮೊಗ್ಗ-ಹರಿಹರ ಮಾರ್ಗ ನಿರ್ಮಾಣಕ್ಕೆ ಅನುದಾನ
ಶಿವಮೊಗ್ಗ-ಮಂಗಳೂರು ಮಾರ್ಗಕ್ಕೆ ಅನುಮತಿ 
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ ಅನುದಾನ
ತಾಳಗುಪ್ಪ-ಹೊನ್ನಾವರ ಮಾರ್ಗಕ್ಕೆ ಅನುದಾನ
ಶಿವಮೊಗ್ಗ-ಬೀರೂರು ದ್ವಿಪಥ ನಿರ್ಮಾಣ ಆರಂಭ
ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಚೆನ್ನೈ ರೈಲು ಸಂಚಾರ
ಶಿವಮೊಗ್ಗದಲ್ಲಿ ಪ್ರತ್ಯೇಕ ಗೂಡ್ಸ್ ರೈಲು ನಿಲ್ದಾಣ
ಶಿವಮೊಗ್ಗದ ಕೋಟೆಗಂಗೂರು ನಿಲ್ದಾಣ ಅಭಿವೃದ್ದಿ
ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ
ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣ ಅಭಿವೃದ್ದಿ

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News