ಶಾಸಕರಿಗೆ ಝೀರೋ ಟ್ರಾಫಿಕ್ ಕೊಟ್ಟಿರಲಿಲ್ಲ: ಸ್ಪೀಕರ್ ಸ್ಪಷ್ಟಣೆ

Update: 2019-07-22 17:12 GMT

ಬೆಂಗಳೂರು, ಜು.22: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಆಗಮಿಸಿದ ಶಾಸಕರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿರಲಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸ್ಪಷ್ಟನೆ ನೀಡಿದರು.

ಸೋಮವಾರ ವಿಧಾನಸಭೆಯಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಕೊಟ್ಟಿರುವುದಾಗಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಹಾಗೂ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಗೃಹ ಸಚಿವ ಎಂ.ಬಿ.ಪಾಟೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಉತ್ತರಿಸುವುದಾಗಿ ಗೃಹ ಸಚಿವರು ಹೇಳಿದ್ದರು.

ಝೀರೋ ಟ್ರಾಫಿಕ್ ಕುರಿತು ಸದನದಲ್ಲಿ ಹೇಳಿಕೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು ನನಗೆ ಶಾಸಕರು ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರುವವರೆಗಿನ ವಿಡಿಯೋ ತೋರಿಸಿದ್ದಾರೆ. ಶಾಸಕರು ನಾಲ್ಕು ಕಡೆ ಸಿಗ್ನಲ್‌ನಲ್ಲಿ ನಿಂತು ಬಂದಿದ್ದಾರೆ ಎಂದರು.

ಶಾಸಕರು ವಿಧಾನಸೌಧದ ಒಳಗೆ ಹೋಗುವವರೆಗೆ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಝೀರೋ ಟ್ರಾಫಿಕ್ ಕೊಡುವಂತೆ ರಾಜ್ಯಪಾಲರಾಗಲಿ ಅಥವಾ ಯಾವುದೇ ಅಧಿಕಾರದ ಸ್ಥಾನದಿಂದ ಸೂಚನೆ ಹೋಗಿರಲಿಲ್ಲ ಎಂದು ಸ್ಪೀಕರ್ ಹೇಳಿದರು.

ಮಾಧ್ಯಮದವರಿಗೆ ರೋಚಕತೆ ಇದ್ದರೆ ಹಾಕುತ್ತಾರೆ. ನಮ್ಮ ಅನುಕೂಲ, ಅನಾನುಕೂಲಕ್ಕೆ ತಕ್ಕಂತೆ ಅವರನ್ನು ಬಳಸಿಕೊಳ್ಳುತ್ತೇವೆ. ನಾವು ಸ್ವಲ್ಪ ನ್ಯಾಯ ನಿಷ್ಠುರವಾಗಿ ನಡೆದುಕೊಂಡರೆ ಇಂತಹ ಪರಿಸ್ಥಿತಿ ಇರಲ್ಲ. ರಾಜ್ಯಪಾಲರ ಹುದ್ದೆಗೆ ಅಗೌರವ ತರುವ ಕೆಲಸ ಆಗಬಾರದು ಎಂದು ರಮೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News