ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾದೇಶಿಕ ಭಾಷೆಗಳಿಗೆ ಪೆಟ್ಟು: ಎಸ್.ಜಿ. ಸಿದ್ದರಾಮಯ್ಯ

Update: 2019-07-25 15:54 GMT

ಬೆಂಗಳೂರು, ಜು.25: ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳಿಗೆ ದೊಡ್ಡ ಪೆಟ್ಟು ಕೊಡುವ ಸಾಧ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ನಗರದ ವಿವೇಕಾನಂದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2019’ ಚರ್ಚಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ತುರ್ತು ಅವಶ್ಯಕತೆ ಇದೆ. ಆದರೆ, ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವುದು ಅವೈಜ್ಞಾನಿಕ ಶಿಕ್ಷಣ ನೀತಿಯಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿಯಲಿದ್ದು, ಅನೇಕರು ಬದುಕು ಕಳೆದುಕೊಳ್ಳಲಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಶಿಕ್ಷಣ ನೀತಿ-2019 ರ ಕರಡು ಪ್ರತಿಯು ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆಗಳಲ್ಲಿಯೂ ಪ್ರಕಟಿಸಬೇಕು. ಎಲ್ಲ ವರ್ಗದ ಜನರೂ ಈ ಕರಡು ಕುರಿತು ಚರ್ಚೆಗಳನ್ನು ನಡೆಸಬೇಕು. ಆಗ ಮಾತ್ರ ಅದನ್ನು ಒಪ್ಪಲು ಸಾಧ್ಯ. ಆದರೆ, ಕೇಂದ್ರವು ಕೇವಲ ಎರಡು ಭಾಷೆಯಲ್ಲಿ ಅಷ್ಟೇ ಪ್ರಕಟಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ದೂರಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಒಂದು ಪಕ್ಷದ ಅಜೆಂಡಾವನ್ನಿಟ್ಟುಕೊಂಡು ದೇಶದ ಶಿಕ್ಷಣ ನೀತಿ ರಚನೆ ಮಾಡಲು ಮುಂದಾಗಿದೆ. ಆ ನೀತಿಯಲ್ಲಿ ಸಂಸ್ಕೃತವನ್ನು ಕಡ್ಡಾಯ ಮಾಡಲು ಮುಂದಾಗಿದೆ ಎಂದ ಅವರು, ಸಂವಿಧಾನದ ಆಶಯಗಳಿಗೆ ಪೂರಕವಾದ ಆಶಯಗಳನ್ನಿಟ್ಟುಕೊಂಡು ಶಿಕ್ಷಣ ನೀತಿಯಿರಬೇಕೆ ಹೊರತು ಸಂವಿಧಾನ ವಿರೋಧಿಯಾಗಿ ಅಲ್ಲ ಎಂದು ಪ್ರತಿಪಾದಿಸಿದರು.

ಸಂವಿಧಾನವು ದೇಶದ ಸಾಮಾಜಿಕ, ಭೌಗೋಳಿಕ ಸ್ಥಿತಿ, ಪರಂಪರೆ ಎಲ್ಲವನ್ನೂ ಒಳಗೊಂಡು ರಚನೆಯಾಗಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಳ್ಳಬೇಕು. ಆದರೆ, ಸಂವಿಧಾನದ ನಿರ್ಲಕ್ಷತನದ ಚಿಂತನೆಗಳು ಇದರಲ್ಲಿ ಕಂಡುಬರುತ್ತಿವೆ. ‘ರಾಷ್ಟ್ರೀಯ’ ಹೆಸರಿನಲ್ಲಿ ಅನ್ಯಭಾಷೆಯನ್ನು ಮಗುವಿನ ಬಾಯಲ್ಲಿ ತುರುಕಲು ಮುಂದಾಗಿರುವುದು ಜನವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತವು ಬಹು ಭಾಷೆಗಳಿಂದ ಕೂಡಿರುವ ರಾಷ್ಟ್ರವಾಗಿದೆ. ಸ್ಥಳೀಯವಾಗಿ ಅನೇಕ ಭಾಷೆಗಳನ್ನು ಒಳಗೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರೌಢ ಶಿಕ್ಷಣದವರೆಗೂ ಆಯಾ ಸ್ಥಳೀಯ ಭಾಷೆಗಳ ಆಧಾರದಲ್ಲಿ ಬೋಧಿಸಲ್ಪಡಬೇಕು. ಅಲ್ಲದೆ, 1ರಿಂದ 7ನೇ ತರಗತಿವರೆಗೆ ಆಯಾ ರಾಜ್ಯ ಭಾಷೆಗಳೇ ಮಾಧ್ಯಮ ಭಾಷೆಗಳಾಗಬೇಕು ಎಂದರು.

ಹುಟ್ಟಿದ ಮಗುವಿಗೆ ಅನ್ನ ಉಣಿಸಬೇಡಿ: ಮಾತೃಭಾಷೆ ಎನ್ನುವುದು ತಾಯಿಯ ಹಾಲು ಇದ್ದಂತೆ. ಅಂದ ಮಾತ್ರಕ್ಕೆ ಬೇರೆ ಭಾಷೆಗಳನ್ನು ಕಲಿಸಬಾರದು ಎಂದಂತಲ್ಲ. ಆದರೆ, ಹುಟ್ಟಿದ ಮಗುವಿಗೆ ನೇರವಾಗಿ ಅನ್ನವನ್ನು ತಿನ್ನಿಸಲು ಆಗುವುದಿಲ್ಲ. ನಿಧಾನಕ್ಕೆ ಅನ್ನವನ್ನು ಕಲಿಸಿ ಮಗುವಿಗೆ ತಿನ್ನಿಸಬೇಕು. ಅದೇ ರೀತಿಯಲ್ಲಿ ಬೇರೆ ಭಾಷೆಗಳನ್ನು ತರಾತುರಿಯಲ್ಲಿ ಕಲಿಯುವಂತೆ ಮಗುವಿನ ಮೇಲೆ ಒತ್ತಡ ಹೇರಬಾರದು. ಆ ಮೂಲಕ ಮಗುವಿನ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಸಲಹೆಗಾರ ಡಾ.ಎ.ಸಿ.ರಘುರಾಂ, ಪದಾಧಿಕಾರಿಗಳಾದ ಡಾ.ಬಿ.ಜಿ. ಭಾಸ್ಕರ, ಸಿ.ಎನ್.ಮಂಚೇಗೌಡ, ಐ.ನಾರಾಯಣರೆಡ್ಡಿ, ಡಾ.ಎನ್.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News