ವಿಶ್ವಾಸಮತದ ಸೋಲು ಪ್ರಜಾಸತ್ತತೆಗೆ ಹಿನ್ನಡೆ: ಸಿಪಿಎಂ ಆತಂಕ

Update: 2019-07-25 18:48 GMT

ಬೆಂಗಳೂರು, ಜು.25: ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತದ ಸೋಲು ದೇಶದ ಪ್ರಜಾಸತ್ತೆಗಾದ ತೀವ್ರ ಹಿನ್ನಡೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಆತಂಕ ವ್ಯಕ್ತಪಡಿಸಿದೆ.

ಕಳೆದ 15 ತಿಂಗಳಿನಿಂದಲೂ ಬಿಜೆಪಿ 5 ಬಾರಿ ಇಂತಹ ವಿಫಲ ಯತ್ನಗಳನ್ನು ನಡೆಸುತ್ತಾ ರಾಜ್ಯದ ಮೈತ್ರಿ ಸರಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುವ ಜನದ್ರೋಹಿ ಕೆಲಸವನ್ನು ಅದು ಮುನ್ನಡೆಸುತ್ತಿದೆ. 225 ಸದಸ್ಯ ಬಲದ ಶಾಸನ ಸಭೆಯಲ್ಲಿ ಸರಳ ಬಹುಮತವನ್ನು ಹೊಂದಲು ಕನಿಷ್ಠ 113 ಶಾಸಕ ಬಲವನ್ನು ಸ್ವತಃವಾಗಲೀ ಇಲ್ಲವೇ ಇತರರ ಬೆಂಬಲದಿಂದಾಗಲೀ ಹೊಂದಿದ್ದಲ್ಲಿ ಮಾತ್ರವೇ ಸರಕಾರ ರಚನೆ ಸಾದ್ಯವೆಂಬುದು ಮತ್ತು ತನಗೆ ಅಂತಹ ಬಲ ವಿಧಾನಸಭೆಯಲ್ಲಿ ಇಲ್ಲವೆಂಬುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿತ್ತು.

ಆದರೂ, ತಾನೊಂದು ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವ ಬದಲು ಇಂತಹ ಪ್ರಜಾಸತ್ತೆಯನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಕೈ ಹಾಕಿರುವುದು ಖಂಡನಾರ್ಹ. ಹೇಗಾದರೂ ಮಾಡಿ, ಅಧಿಕಾರ ಪಡೆಯಲು, ಅದಕ್ಕಿದ್ದದ್ದು ಒಂದೇ ಅನೈತಿಕ ಮತ್ತು ಅಕ್ರಮ ಮಾರ್ಗ. ಅದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿದೆ.

ಮೈತ್ರಿ ಸರಕಾರದ 16 ಶಾಸಕರನ್ನು ಕೋಟಿಗಟ್ಟಲೆ ರೂ. ಹಣ ನೀಡುವ ಮತ್ತು ಮಂತ್ರಿಗಳನ್ನಾಗಿಸುವ ಅಧಿಕಾರದ ಆಮಿಷವೊಡ್ಡಿ ಅವರಿಂದ ರಾಜೀನಾಮೆ ಕೊಡಿಸಿ, ಮೈತ್ರಿ ಸರಕಾರವನ್ನು ಉರುಳಿಸಿದೆ. ಅಷ್ಟಕ್ಕೆ ಬಲಿಯಾಗಿ ಜನತೆಗೆ ವಿಶ್ವಾಸ ದ್ರೋಹ ಎಸಗಲು ಮುಂದಾದ ಶಾಸಕರನ್ನು ಮುಂಬೈಗೆ ಕಳುಹಿಸುವಲ್ಲಿ ಮತ್ತು ಮುಂಬೈ ಹೊಟೇಲ್‌ನಲ್ಲಿ ಪಕ್ಷದ ಮುಖಂಡರು ಮತ್ತು ರಾಜ್ಯ ಸರಕಾರದ ಮಂತ್ರಿಗಳು, ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡದಂತೆ ಅಕ್ರಮದಲ್ಲಿ ತೊಡಗಲು ಸ್ಥಳೀಯ ಬಿಜೆಪಿ ಸರಕಾರವನ್ನು ಬಳಸಿಕೊಂಡಿರುವುದು ಖಂಡನಾರ್ಹ ಎಂದು ಸಿಪಿಎಂ ಆಕ್ಷೇಪಿಸಿದೆ.

ರಾಜ್ಯದ ರಾಜ್ಯಪಾಲರ ಕಚೇರಿಯ ದುರ್ಬಳಕೆ ಮಾಡಿಕೊಂಡು ಬೇಗನೆ ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ ಹಾಗೂ ಸಭಾದ್ಯಕ್ಷರ ಮೇಲೆ ತೀವ್ರ ಒತ್ತಡ ಹೇರುವ ಮೂಲಕ ಬಿಜೆಪಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಆ ಮೂಲಕ ತಮ್ಮ ಅಕ್ರಮವು ವಿಧಾನ ಸಭೆಯ ಚರ್ಚೆಯ ಮೂಲಕ ರಾಜ್ಯ ಹಾಗೂ ದೇಶದ ಜನತೆ ಗಮನಕ್ಕೆ ಬಾರದಂತೆ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಸಿಪಿಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News