ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬಾಹ್ಯ ಬೆಂಬಲ ?

Update: 2019-07-26 17:44 GMT

ಬೆಂಗಳೂರು, ಜು.26: ನೂತನವಾಗಿ ಸರಕಾರ ರಚಿಸಿರುವ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಶಾಸಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ನಗರದ ಖಾಸಗಿ​​​ ಹೋಟೆಲ್​ನಲ್ಲಿ ಇಂದು ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದ್ದು, ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು, ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಕೆಲವು ಶಾಸಕರು ಹೇಳಿದ್ದಾರೆ. ಮತ್ತೆ ಕೆಲವರು ಪ್ರತಿ ಪಕ್ಷದಲ್ಲಿದ್ದು ಪಕ್ಷ ಸಂಘಟನೆ ಮಾಡಲು ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಅಂತಿಮ ನಿರ್ಧಾರ ಕೈಗೊಳ್ಳಲು ಕುಮಾರಸ್ವಾಮಿಗೆ ಅಧಿಕಾರ ನೀಡಲಾಗಿದೆ. ಅವರು ಏನೇ ತೀರ್ಮಾನ ಮಾಡಿದರೂ‌ ನಾವೆಲ್ಲರೂ ‌ಒಗ್ಗಟ್ಟಾಗಿರುತ್ತೇವೆ ಎಂದು ಜಿಟಿಡಿ ಹೇಳಿದ್ದಾಗಿ ವರದಿಯಾಗಿದೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿ 14 ತಿಂಗಳು ಸರಕಾರ ನಡೆಸಿದ ಬಳಿಕ ಕುಮಾರಸ್ವಾಮಿ ನೇತೃತ್ವದ ಸರಕಾರ ಬಹುಮತವಿಲ್ಲದೇ ಪತನಗೊಂಡಿದ್ದು, ನೂತನವಾಗಿ ಸರಕಾರ ರಚಿಸಿರುವ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಮಯಾವಕಾಶ ನೀಡಲಾಗಿದೆ. ಆದರೆ ಬಹುಮತ ಸಾಬೀತು ಮಾಡುವ ಬಗ್ಗೆ ಸಂಕಷ್ಟದಲ್ಲಿರುವ ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡಲಿದೆ ಎಂಬುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News