ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸಮ್ಮತಿಸಿದ ಹೈಕೋರ್ಟ್

Update: 2019-07-27 16:15 GMT

ಬೆಂಗಳೂರು, ಜು.27: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಯುವತಿ ಧರಿಸಿದ್ದ ಗರ್ಭವನ್ನು ತೆಗೆಸಲು ಸಮ್ಮತಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಷ್ಟೇ ಅಲ್ಲದೆ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 3 ಲಕ್ಷ ರೂ. ಮತ್ತು ಸಂಬಂಧಪಟ್ಟ ಪೊಲೀಸ್ ಉಪ ಆಯುಕ್ತರು 75 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.

ಸಂತ್ರಸ್ತೆ ಯುವತಿ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದು, ಭ್ರೂಣಕ್ಕೆ 21 ವಾರವಾಗಿದೆ. ಮಗು ಪಡೆಯಲು ನನಗೆ ಇಷ್ಟವಿಲ್ಲ. ಭ್ರೂಣ ತೆಗೆಸಲು ವಾಣಿ ವಿಲಾಸ ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯಕೀಯ ಮಂಡಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಳು ಎಂದು ತಿಳಿದುಬಂದಿದೆ.

ಗರ್ಭಪಾತ ಮಾಡಿಕೊಳ್ಳುವುದಕ್ಕೆ ಯುವತಿ ಮಾನಸಿಕವಾಗಿ ಸದೃಢವಾಗಿದ್ದಾಳೆಂದು ಜಿಲ್ಲಾ ವೈದ್ಯಕೀಯ ಮಂಡಳಿಯೂ ಹೈಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಿತ್ತು. ಇದರ ಅನ್ವಯ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಗರ್ಭಪಾತಕ್ಕೆ ಪರಿಗಣಿಸಿದೆ.

ವಾಣಿ ವಿಲಾಸ ಆಸ್ಪತ್ರೆಯು ಆಕೆಯನ್ನು ದಾಖಲಿಸಿಕೊಂಡು ಗರ್ಭಪಾತ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖಾಧಿಕಾರಿಯು ಪ್ರಕರಣದ ವಿಚಾರಣೆಗಾಗಿ, ಆಕೆಯ ಗರ್ಭದಿಂದ ಹೊರತೆಗೆದ ಭ್ರೂಣದ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News