'ಇಂದಿರಾ ಕ್ಯಾಂಟೀನ್' ಹೆಸರು ಬದಲಾವಣೆಗೆ ಬಿಜೆಪಿ ಚಿಂತನೆ

Update: 2019-07-28 13:17 GMT

ಬೆಂಗಳೂರು, ಜು.28: ರಾಜ್ಯದಲ್ಲಿ ಬಿಜೆಪಿ ಪಕ್ಷ ಬಹುಮತ ಸಾಬೀತುಗೊಂಡು ಸರಕಾರ ರಚನೆಯಾದರೆ ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ.

ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರ ಆರಂಭಿಸಿದ ನಂತರ ಅನೇಕ ಪ್ರಮುಖ ನಿರ್ಧಾರಗಳ ಕುರಿತಂತೆ ತೀರ್ಮಾನ ಕೈಗೊಳ್ಳಲಿದ್ದು, ಈ ತೀರ್ಮಾನಗಳಲ್ಲಿ ಇಂದಿರಾ ಹೆಸರು ಬದಲಾವಣೆ ನಿರ್ಧಾರವೂ ಒಂದು ಎನ್ನಲಾಗಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತಂತೆ ಬಿಜೆಪಿಯು ಬಿಬಿಎಂಪಿ ಮತ್ತು ಸಾರ್ವಜನಿಕ ಆಡಳಿತ ಇಲಾಖೆಯೊಂದಿಗೆ ಈಗಾಗಲೇ ಚರ್ಚಿಸಿದೆ.

ಲಿಖಿತ ಆದೇಶ ಜಾರಿ ಮಾಡಿದ ನಂತರ ಹೆಸರು ಬದಲಾವಣೆ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ತಿಳಿದು ಬಂದಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಚಿಂತಿಸಿರುವ ಬಿಜೆಪಿ ನಾಯಕರು, ಕ್ಯಾಂಟೀನ್‌ಗೆ ರಾಜಕೀಯ ನಾಯಕ, ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವುದಿಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಕಾಂಗ್ರೆಸ್ ಪಕ್ಷ ಇಂದಿರಾ ಅವರ ಹೆಸರನ್ನು ಬಳಸಿಕೊಂಡಿರುವುದು ಚುನಾವಣೆಯ ಗಿಮಿಕ್ ಅಷ್ಟೇ. ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಹೆಸರಿನಲ್ಲೂ ಇನ್ನೂ ಅನೇಕ ಯೋಜನೆಗಳಿವೆ. ಆಡಳಿತ ಬದಲಾವಣೆ ಆಗುತ್ತಿರುವುದರಿಂದ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಉದ್ದೇಶವನ್ನು ಹೊಂದಿಲ್ಲ. ಆದರೆ, ಪಕ್ಷದ ಪ್ರಣಾಳಿಕೆಯಲ್ಲಿ ಈ ವಿಷಯ ಘೋಷಣೆ ಮಾಡಿರುವ ಹಿನ್ನೆಲೆ ಇಂದಿರಾ ಕ್ಯಾಂಟೀನ್‌ಗೆ ಮರು ನಾಮಕರಣ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಹೈದರಾಬಾದ್‌ನಲ್ಲಿ ಈಗಾಗಲೇ ರಿಯಾಯಿತಿ ದರದಲ್ಲಿ ಬಡವರಿಗೆ ಆಹಾರ ಪೂರೈಸುತ್ತಿರುವ ಅನ್ನಪೂರ್ಣ ಹೆಸರಿನ ಕ್ಯಾಂಟೀನ್‌ಗಳಿವೆ. ಮೆನುವಿನಲ್ಲಿ ಹೆಚ್ಚು ಆಹಾರ ಪಟ್ಟಿಯನ್ನು ನೀಡುವುದರೊಂದಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸಲು ಚಿಂತಿಸಲಾಗುತ್ತಿದೆ. ಇದಕ್ಕಾಗಿ ಅಕ್ಷಯಪಾತ್ರೆ ಪ್ರತಿಷ್ಠಾನದೊಂದಿಗೆ ಮುಂದುವರೆಯಲು ನಿರ್ಧರಿಸಲಾಗಿದೆ ಎಂದೂ ಪಕ್ಷದ ಮೂಲದಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News