ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸ್ಥಳೀಯರು, ರಾಜಕಾರಣಿಗಳಿಂದ ಆಕ್ಷೇಪ

Update: 2019-07-28 17:59 GMT

ಬೆಂಗಳೂರು, ಜು.28: ಪ್ರತಿ ವರ್ಷ ಜುಲೈ 29 ರಂದು ಅಂತರ್ ರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತಿದೆ. ಹುಲಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಆದರೆ, ಕುದುರೆಮುಖ ವನ್ಯಜೀವಿ ಅಭಯಾರಣ್ಯವನ್ನು ಮತ್ತೆ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಕೆಲವೊಂದು ಕಾನೂನುಗಳು ಅಡ್ಡಿಯಾಗಿವೆ. ಘೋಷಣೆಗೆ ಸ್ಥಳೀಯರು ಮತ್ತು ರಾಜಕಾರಣಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಕರ್ನಾಟಕದ ಆರನೇ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲು ಇಲಾಖೆ ಮುಂದಾಗಿದ್ದು, ಈ ಪ್ರಸ್ತಾಪಕ್ಕೆ ರಾಜ್ಯ ವನ್ಯಜೀವಿ ಮಂಡಳಿ, ರಾಜ್ಯ ಸರಕಾರ ಮತ್ತು ಎನ್‌ಟಿಸಿಎ ಅನುಮತಿ ನೀಡಿವೆ.

ಇನ್ನು, ಹುಲಿಗಳ ಸಂಖ್ಯೆ ಹೆಚ್ಚಿಸಲು ಮೀಸಲು ವಲಯ, ಸೂಕ್ಷ್ಮ ವಲಯಗಳು ಮತ್ತು ಬಫರ್ ವಲಯಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ರಾಜ್ಯದಲ್ಲಿ ಕಳೆದ ಬಾರಿಗಿಂತ ಹುಲಿ ಸಂತತಿ ಹೆಚ್ಚಾಗಿರುವುದು ಹಲವು ಸಮೀಕ್ಷೆಗಳ ಮೂಲಕ ತಿಳಿದು ಬಂದಿದೆ. ಹಾಗೆಯೇ ಹುಲಿ ಮೀಸಲು ಪ್ರದೇಶಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ) ತಿಳಿಸಿದ್ದಾರೆ.

ಅಲ್ಲದೆ, ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಹುಲಿ ರಕ್ಷಣಾ ದಳಗಳ ಸ್ಥಾಪನೆ, ಮಳೆಗಾಲದಲ್ಲಿ ವಿಶೇಷ ಗಸ್ತು ತಿರುಗುವಿಕೆ, ಕಳ್ಳಬೇಟೆ ತಡೆ, ಶಿಬಿರಗಳ ಸ್ಥಾಪನೆ ಹಾಗೂ ನಿರ್ವಹಣೆ, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಕಾಡ್ಗಿಚ್ಚಿನಿಂದ ರಕ್ಷಣೆ, ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ವ್ಯವಸ್ಥೆ ಕಲ್ಪಿಸುವುದು. ಹುಲಿಗಳ ಆವಾಸ ಸ್ಥಾನ ಹಾಗೂ ಹುಲಿಗಳ ಪರಿಸರ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಲು ಇಲಾಖೆ ಕ್ರಮ ಕೈಗೊಂಡಿದೆ.

ಹುಲಿ ಗಣತಿ: ಕ್ಯಾಮೆರಾ ಟ್ರ್ಯಾಪ್ ವಿಧಾನದಿಂದ ಉತ್ತಮ ಸಂರಕ್ಷಣಾ ಕ್ರಮಗಳು ಮತ್ತು ಮೌಲ್ಯಮಾಪನ ಮಾದರಿಗಳಿಂದಾಗಿ 2014ರಲ್ಲಿ ಹುಲಿಗಳ ಗಣತಿ ಮಾಡಲಾಗಿದೆ. ಇದರಿಂದ ಅವುಗಳ ಸಂತತಿ ಹೆಚ್ಚಿಸಲು ಅನುಕೂಲವಾಗಿದೆ. 2019 ರ ಹುಲಿಗಣತಿ ವರದಿ ತಯಾರಿಸಲಾಗಿದ್ದು, ಸಂಖ್ಯೆಯ ಹೆಚ್ಚಳವು ಪ್ರಾದೇಶಿಕ ವಿಭಾಗಗಳು ಮತ್ತು ಕಾಡುಗಳ ಸುತ್ತಮುತ್ತಲಿನ ಅರಣ್ಯೇತರ ಪ್ರದೇಶಗಳಂತಹ ಮೀಸಲು ಪ್ರದೇಶಗಳನ್ನು ನೇರ ವೀಕ್ಷಣೆಗಳಿಂದ ಮತ್ತು ಕ್ಯಾಮೆರಾ ಟ್ಯಾಪ್‌ಗಳ ಮೂಲಕ ಗಣತಿ ನಡೆಸಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 406 ಹುಲಿ: 2014 ರ ಜನಗಣತಿಯ ಪ್ರಕಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಭಾರತದ ವರದಿಯ ಪ್ರಕಾರ ಕರ್ನಾಟಕದಲ್ಲಿ 406 ಹುಲಿಗಳು ಇರುವುದು ಸಚಿವಾಲಯದ ವರದಿ ತಿಳಿಸಿತ್ತು. ದೇಶದಲ್ಲಿ ಒಟ್ಟು 2,226 ಹುಲಿಗಳು ಇವೆ ಎಂದು ಅಂದಾಜಿಸಲಾಗಿದ್ದು, 2006 ಮತ್ತು 2010ರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವರದಿ ಪ್ರಕಾರ ರಾಜ್ಯದಲ್ಲಿ ಕ್ರಮವಾಗಿ 290 ಮತ್ತು 300 ಹುಲಿಗಳೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿತ್ತು.

ಹುಲಿ ಯೋಜನೆ: ಹುಲಿ ಯೋಜನೆಯನ್ನು 1973ರಿಂದ ಅನುಷ್ಠಾನ ಗೊಳಿಸಲಾಗಿದೆ. ಈ ಯೋಜನೆಯು ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ, ರಾಜೀವ್‌ಗಾಂಧಿ (ನಾಗರಹೊಳೆ) ಹುಲಿ ಸಂರಕ್ಷಣಾ ಪ್ರದೇಶ, ಭದ್ರಾ ಹುಲಿ ಸಂರಕ್ಷಣಾ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಅಣಶಿ-ದಾಂಡೇಲಿ ಹುಲಿ ಸಂರಕ್ಷಣಾ ಪ್ರದೇಶ ಒಟ್ಟು 38569.06 ಚದರ.ಕಿ.ಮೀ ಪ್ರದೇಶವನ್ನೊಳಗೊಂಡಿದೆ.

ಇದಕ್ಕಾಗಿ ಕೇಂದ್ರ ಸರಕಾರ ವೆಚ್ಚದ ಶೇ.60ರಷ್ಟು ಭಾಗವನ್ನು ನೀಡುತ್ತಿದ್ದು, ರಾಜ್ಯ ಸರಕಾರ ಶೇ.40ರಷ್ಟು ಅನುಪಾತದಲ್ಲಿ ಅನುದಾನವನ್ನು ಒದಗಿಸುತ್ತಿದೆ. 2018- 19ರಲ್ಲಿ ಕೇಂದ್ರ ಪಾಲು 22.92 ಕೋಟಿ ರೂ. ರಾಜ್ಯದ ಪಾಲು 22.64 ಕೋಟಿ ರೂ. ಆರ್ಥಿಕ ಸಹಾಯವನ್ನು ನೀಡಲು ಒಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News