ಸ್ಪೀಕರ್ ತೀರ್ಪು ಸಂವಿಧಾನದ ಘನತೆ ಹೆಚ್ಚಿಸಿದೆ: ಮಾಜಿ ಸಚಿವ ಎಂ.ಸಿ.ನಾಣ್ಣಯ್ಯ

Update: 2019-07-28 18:41 GMT

ಬೆಂಗಳೂರು, ಜು.28: ಪಕ್ಷಾಂತರ ನಿಷೇಧ ಕಾಯ್ದೆ ಅಡಿ 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೀಡಿರುವ ತೀರ್ಪು ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಶೆಡ್ಯೂಲ್ಡ್ 10ರ ಅನ್ವಯ ಪಕ್ಷಾಂತರ ನಿಷೇಧ ಕಾಯ್ದೆಗೆ ಇರುವ ನಿಜವಾದ ಶಕ್ತಿಯನ್ನು ತೋರಿಸಿಕೊಡುವ ಮೂಲಕ ಸ್ಪೀಕರ್, ದೇಶದ ಪ್ರಜಾಪ್ರಭುತ್ವದ ಗೌರವವನ್ನು ಕಾಪಾಡಿದ್ದಾರೆ ಎಂದರು.

ಸ್ಪೀಕರ್ ನೀಡಿರುವ ಈ ಐತಿಹಾಸಿಕ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಬೇಕು. ರಾಜೀವ್ ಗಾಂಧಿ ಪ್ರಧಾನಿ ಯಾಗಿದ್ದಾಗ ಸದುದ್ದೇಶದಿಂದ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು. ಆದರೆ, ಇವತ್ತು ಅದಕ್ಕೆ ವ್ಯತಿರಿಕಿಕ್ತವಾಗಿ ಶಾಸಕರನ್ನು ತಮಗೆ ಬೇಕಾದಂತೆ ಖರೀದಿಸುವ, ತಮಗಿಷ್ಟ ಬಂದಂತೆ ಸರಕಾರಗಳನ್ನು ಬದಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನರು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಇಂತಹ ಸ್ಥಿತಿಯಲ್ಲಿ 17 ಶಾಸಕರನ್ನು ಅನರ್ಹಗೊಳಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ಶಕ್ತಿಗಳು ಇನ್ನೂ ಇವೆ ಎಂಬುದನ್ನು ಸ್ಪೀಕರ್ ಸಾಬೀತುಪಡಿಸಿದ್ದಾರೆ ಎಂದು ನಾಣಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News