ಬಿಜೆಪಿ ಸರಕಾರ ಸಿಬಿಐ, ಆರ್ ಬಿಐ ಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-07-28 19:09 GMT

ಮೈಸೂರು,ಜು.28: ಕೇಂದ್ರದ ಬಿಜೆಪಿ ಸರಕಾರ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಆರ್‍ಬಿಐ ಅನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳುತ್ತಿದೆ ಎಂದು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಮಹರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ರವಿವಾರ ಕರ್ನಾಟಕ ದಲಿತ ವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ “ಕರುನಾಡ ಭೂಷಣ ಪ್ರಶಸ್ತಿ” ಪ್ರಧಾನ ಮಾಡಿ ಅವರು ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕಾದ ಕೇಂದ್ರದ ಬಿಜೆಪಿ ಸರಕಾರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ ಮತ್ತು ಆರ್‍ಬಿಐಗಳನ್ನು ತನಗೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಇಬ್ಬರು ಆರ್‍ಬಿಐ ಗವರ್ನರ್ ಗಳು ಇವರ ಆಡಳಿತ ನೋಡಿ ಹಿಂದಕ್ಕೆ ಹೋಗಿದ್ದಾರೆ ಎಂದು ಹೇಳಿದರು.

ದೇಶವನ್ನು ಗುಡಿಯಲ್ಲಿರುವ ದೇವರು ಕಾಯುತ್ತಾನೋ ಇಲ್ಲವೊ, ಗಡಿಯಲ್ಲಿರುವ ದೇವರು (ಸೈನಿಕರು) ಕಾಯುತ್ತಿದ್ದಾರೆ. ನಮ್ಮನ್ನು ಆಳುವ ರಾಜಕೀಯ ಪಕ್ಷಗಳು ವಿಧಾನಸೌಧದಲ್ಲಿ ಆಡಳಿತ ನಡೆಸುವ ಬದಲು ರೆಸಾರ್ಟ್‍ನಲ್ಲಿ ನಡೆಸುತ್ತಿವೆ. ಕೆಂಗಲ್ ಹನುಮಂತಯ್ಯ ಅವರಿಗೆ ಈ ರೀತಿಯ ಬೆಳವಣಿಗೆ ಗೊತ್ತಿದ್ದರೆ ವಿಧಾನಸೌಧದ ಬದಲು ರೆಸಾರ್ಟ್ ಕಟ್ಟಿಸುತ್ತಿದ್ದರೇನೋ ಎಂದು ವ್ಯಂಗ್ಯವಾಡಿದರು.

ದಲಿತ, ಹಿಂದುಳಿದ, ಅಲ್ಪಂಸಂಖ್ಯಾತರು ವಿದ್ಯಾವಂತರಾಗಬೇಕು, ಮೌಲ್ಯವಿಲ್ಲದ ಶಿಕ್ಷಣ ಉಪಯೋಗವಿಲ್ಲ. ಅಂಕಗಳಿಂದ ಮಾನವೀಯ ಮೌಲ್ಯ ಬರುವುದಿಲ್ಲ. ದೇವರು ಬಂದು ಅಂಕ ಕೊಡಲ್ಲ, ಸರಕಾರ ಕೊಡಲ್ಲ, ಪ್ರತಿಯೊಬ್ಬರು ತಮಗೆ ತಾವೇ ಕಷ್ಟಪಟ್ಟರೆ ಜೀವನದಲ್ಲಿ ಮುಂದೆ ಬರಬಹದು. ಆ ನಿಟ್ಟಿನಲ್ಲಿ ನೀವೆಲ್ಲರೂ ಜಾಗೃತರಾಗಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಮಾಜಿ ಮೇಯರ್ ಪುರುಷೋತ್ತಮ್, ಜಿ.ಪಂ.ಸದಸ್ಯ ಬೀರಿಹುಂಡಿ ಬಸವಣ್ಣ, ಎಪಿಎಂಸಿ ಉಪಾಧ್ಯಕ್ಷ ಜವರಪ್ಪ, ಜೆಡಿಎಸ್ ಮುಖಂಡ ಬೆಳವಾಡಿ ಶಿವಕುಮಾರಸ್ವಾಮಿ, ವೇದಿಕೆ ವಿಭಾಗೀಯ ಅಧ್ಯಕ್ಷ ನಾಗನಹಳ್ಳಿ ಎಂ.ರೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News