ಸರ್ವ ಪ್ರಯತ್ನಪಟ್ಟರೂ ನಾನು ವಿಫಲನಾದೆ: ಕಾಫಿ ಡೇ ನಿರ್ದೇಶಕರು, ಸಿಬ್ಬಂದಿಗೆ ಸಿದ್ಧಾರ್ಥ್ ಬರೆದ ಪತ್ರ ಬಹಿರಂಗ

Update: 2019-07-30 10:28 GMT

ಮಂಗಳೂರು, ಜು.30: ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಹಾಗೂ ಉದ್ಯಮಿ ಸಿದ್ಧಾರ್ಥ್ ತೊಕ್ಕೊಟ್ಟು ಸಮೀಪ ನೇತ್ರಾವತಿ ಸೇತುವೆಯ ಬಳಿ ನಾಪತ್ತೆಯಾಗಿ 15 ಗಂಟೆಗಳು ಕಳೆದರೂ, ಅವರ ಬಗ್ಗೆ ಸುಳಿವು ಲಭ್ಯವಾಗಿಲ್ಲ. ಅವರು ನಾಪತ್ತೆಯಾಗುವ ಮುನ್ನ ಸುದೀರ್ಘ ಪತ್ರ ಬರೆದಿರುವುದು ಮತ್ತು ಪತ್ರದಲ್ಲಿ ತನ್ನೆಲ್ಲ ಸಂಕಷ್ಟಗಳನ್ನು ತೋಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜುಲೈ 27ರಂದು ತಮ್ಮ ಕಂಪನಿಯ ನೌಕರರಿಗೆ ಸಿದ್ದಾರ್ಥ್ ಬರೆದಿರುವ ಪತ್ರದಲ್ಲಿ, ಐಟಿ(ಆದಾಯ ತೆರಿಗೆ)ಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪೆನಿಯ ಷೇರುಗಳನ್ನು ಜಪ್ತಿ ಮಾಡಿದರು, ಇದರಿಂದ ಕಂಪೆನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾನು ಉದ್ಯಮಿಯಾಗಿ ವಿಫಲವಾಗಿದ್ದೇನೆ, ತಾನು ವ್ಯವಹಾರದಲ್ಲಿ ವೈಫಲ್ಯ ಅನುಭವಿಸಿದ್ದೇನೆ. ತನ್ನ ಎಲ್ಲ ತಪ್ಪುಗಳಿಗೆ ತಾನೇ ಕಾರಣ. ಎಂದು ತಿಳಿಸಿದ್ದಾರೆ.

ಬೆಳಗ್ಗೆ ಬೆಂಗಳೂರಿನಿಂದ ಹೊರಟು ರಾತ್ರಿ 7 ಗಂಟೆಗೆ ಹೊತ್ತಿಗೆ ಮಂಗಳೂರಿನ ಪಂಪ್ ವೆಲ್ ತಲುಪಿದ್ದ ಸಿದ್ಧಾರ್ಥ್ ಬಳಿಕ ತೊಕ್ಕೊಟ್ಟು ಕಡೆಗೆ ಹೊರಟಿದ್ದಾರೆ. ದಾರಿ ಮಧ್ಯೆ ಸೇತುವೆಯ ಬಳಿ ಕಾರನ್ನು ನಿಲ್ಲಿಸಲು ಚಾಲಕನಿಗೆ ಸೂಚಿಸಿದ್ದಾರೆ. ಕಾರಿನಿಂದ ಇಳಿದು ಮೊಬೈಲ್ ನಲ್ಲಿ ಮಾತನಾಡುತ್ತಾ ಸೇತುವೆಯಲ್ಲಿ ಮುಂದೆ ಸಾಗಿದ್ದರು. ಈ ವೇಳೆ ಚಾಲಕನಿಗೆ ಕಾರನ್ನು ತಿರುಗಿಸಿ ಬರುವಂತೆ ಚಾಲಕನಿಗೆ ಹೇಳಿದ್ದರು. ಆದರೆ ಚಾಲಕ ಕಾರನ್ನು ತಿರುಗಿಸಿ ಬರುವಷ್ಟರಲ್ಲಿ ಸಿದ್ಧಾರ್ಥ್ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಸಿದ್ಧಾರ್ಥ್ ಸೇತುವೆಯಿಂದ ನದಿಗೆ ಹಾರಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.  ಶೋಧ ಕಾರ್ಯಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ರಾಜ್ಯದ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

ಸಿದ್ಧಾರ್ಥ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಮಾವ ಎಸ್.ಎಂ. ಕೃಷ್ಣ ನಿವಾಸಕ್ಕೆ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News