ಟಿಪ್ಪು ಜಯಂತಿ ರದ್ದು: ರಾಜ್ಯ ಸರಕಾರದ ವಿರುದ್ಧ ಕನ್ನಡಪರ ಸಂಘಟನೆಗಳು, ಪ್ರಗತಿಪರರ ಆಕ್ರೋಶ

Update: 2019-07-30 15:03 GMT

ಬೆಂಗಳೂರು, ಜು.30: ಮೈಸೂರು ಹುಲಿ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ವಿರುದ್ಧ ನಾಡಿನ ಕನ್ನಡಪರ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು ಸೇರಿದಂತೆ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ ವಿವಾದಿತ ಆದೇಶ ಹೊರಬಿದ್ದ ಬೆನ್ನಲ್ಲೇ ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್, ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ಸರಕಾರ ವಚನ ಭ್ರಷ್ಟವಾಗಿದೆ. ಕೇವಲ ಕೋಮುವಾದಿ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ-ಆರೆಸ್ಸೆಸ್ ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ ಎಂದು ವಾಗ್ದಾಳಿ ನಡೆಸಿದೆ.

ಮಹಾವೀರ: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಟಿಪ್ಪು ಸುಲ್ತಾನ್ ಈ ದೇಶದ ಮಹಾವೀರ. ಆದರೆ, ಬಿಜೆಪಿ ಸರಕಾರ ಜಯಂತಿ ಆದೇಶ ರದ್ದುಗೊಳಿಸಿರುವುದು ಅಪಚಾರ. ಅಷ್ಟೇ ಅಲ್ಲದೆ, ಮಾಜಿ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹ ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದಾರೆ ಎಂದರು.

ಬಿಜೆಪಿ ಸರಕಾರ ರಚನೆ ಆದ ಕೇವಲ ಒಂದೇ ದಿನದಲ್ಲಿ ತನ್ನ ಕೋಮುವಾದಿ ಬಣ್ಣ ಬಹಿರಂಗ ಪಡಿಸಿದೆ. ಇಂತಹ ಶಕ್ತಿಗಳಿಂದಲೇ ಮುಂದೆ ಸಂವಿಧಾನ ಬದಲಾವಣೆ ಆಗುವ ಆತಂಕ ನಮ್ಮಲ್ಲಿ ಮನೆ ಮಾಡಿದೆ. ಇಡೀ ದೇಶದಲ್ಲಿ ಕೋಮು ದ್ವೇಷ ಜ್ವಾಲೆ ಹತ್ತಿಕ್ಕಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ, ಟಿಪ್ಪು ಜಯಂತಿ ರದ್ದುಗೊಳಿಸಿ ಪುಷ್ಟಿ ನೀಡಿದಂತೆ ಇದೆ ಎಂದು ಲೇಖಕಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಏಕಾಏಕಿ ರದ್ದುಗೊಳಿಸಿರುವ ಬಿಜೆಪಿ ಸರಕಾರದ ಕ್ರಮ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷವು ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಾಳೆ(ಜು.31) ಬೆಳಗ್ಗೆ 11:30ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News