ಬರ, ಮಳೆ ಕೊರತೆ: ರೈತರು, ಜನತೆಯ ನೆರವಿಗೆ ಧಾವಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

Update: 2019-07-30 18:01 GMT

ಬೆಂಗಳೂರು, ಜು.30: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಮಳೆಹಾನಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸರಾಸರಿ ಶೇ.18ರಷ್ಟು ಮಳೆ ಕೊರತೆ ಇದೆ. ಮಲೆನಾಡು ಹಾಗೂ ಹೈ.ಕ.ಭಾಗದಲ್ಲಿ ಹೆಚ್ಚು ಮಳೆ ಕೊರತೆ ತಲೆದೋರಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಶೇ.47ರಷ್ಟಿದೆ. 158 ತಾಲೂಕುಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಜುಲೈವರೆಗೆ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಶೇ.53ರಷ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ ಯಡಿಯೂರಪ್ಪ, ರೈತರು ಹಾಗೂ ಜನಸಾಮಾನ್ಯರ ನೆರವಿಗೆ ಅಧಿಕಾರಿಗಳು ಧಾವಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಜನರಿಗೆ ಧೈರ್ಯ ತುಂಬಬೇಕು ಎಂದ ಅವರು, ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ರೈತರು ಬೆಳೆವಿಮೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಮನವೊಲಿಸಲು ಸೂಚಿಸಿದರು.

ಆಗಸ್ಟ್ 2ರಂದು ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ವಸ್ತುಸ್ಥಿತಿ ಮಾಹಿತಿ ಪಡೆದು ಬರ ಪರಿಸ್ಥಿತಿ ಗಂಭೀರತೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಲಾಗುವುದು. ಈಗಾಗಲೇ ಬಾಕಿ ಇರುವ ಹಿಂಗಾರು ಹಂಗಾಮಿನ ಎನ್‌ಡಿಆರ್‌ಎಫ್ ಪರಿಹಾರ, ಉದ್ಯೋಗ ಖಾತ್ರಿ ಯೋಜನೆ ಬಾಕಿ ಅನುದಾನ, ಇತರ ಅಗತ್ಯ ಅನುದಾನಗಳ ಬಿಡುಗಡೆಗೆ ಪ್ರಧಾನಿ ಹಾಗೂ ಕೇಂದ್ರದ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ನೀರು ಪೂರೈಕೆ: ರಾಜ್ಯದಲ್ಲಿ ಪ್ರಸ್ತುತ 3067 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಅಥವಾ ಖಾಸಗಿ ಬೋರ್‌ವೆಲ್ ಗಳಿಂದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಸುಮಾರು 12 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು, 27 ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. 11 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ 547ಕೋಟಿ ರೂ.ಅನುದಾನ ಲಭ್ಯವಿದ್ದು, ಹಣಕಾಸಿನ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ವಿವರಿಸಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್, ಸಿಎಂ ಸಲಹೆಗಾರ ಎಂ.ಲಕ್ಷ್ಮಿನಾರಾಯಣ, ಅಪರ ಮುಖ್ಯ ಕಾರ್ಯದರ್ಶಿ ಆಯುಕ್ತೆ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಸೇರಿ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News