ಶಿವಮೊಗ್ಗ: ಈದುಲ್ ಅಝ್‍ಹಾ ಆಚರಣೆಗೆ ಭದ್ರತೆ ಕಲ್ಪಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ

Update: 2019-07-31 18:42 GMT

ಶಿವಮೊಗ್ಗ, ಜು. 31: ಈದುಲ್ ಅಝ್‍ಹಾ ಆಚರಣೆ ವೇಳೆ ಮುಸ್ಲಿಮರಿಗೆ ಸೂಕ್ತ ಭದ್ರತೆ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿತು. 

ಈದುಲ್ ಅಝ್‍ಹಾವು ಮುಸ್ಲಿಮರ ಪವಿತ್ರ ಹಬ್ಬವಾಗಿದೆ. ಜಗತ್ತಿನಾದ್ಯಂತ ಮುಸ್ಲಿಂ ಧರ್ಮೀಯರು ಕಾನೂನಿನ ಚೌಕಟ್ಟಿನಲ್ಲಿ ಬಲಿದಾನದ ಧಾರ್ಮಿಕ ಕಾರ್ಯ ನಡೆಸುತ್ತಾರೆ. ಇದನ್ನು ನಡೆಸುವುದು ಮುಸ್ಲಿಮರಿಗೆ ಕಡ್ಡಾಯವೂ ಆಗಿದೆ ಎಂದು ಸಂಘಟನೆಯು ಮನವಿ ಪತ್ರದಲ್ಲಿ ತಿಳಿಸಿದೆ. 

ಆದರೆ ಇತ್ತೀಚೆಗೆ ಇಂತಹ ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡುವ ಮತ್ತು ಬೆದರಿಕೆವೊಡ್ಡುವ ಕೃತ್ಯವು ಸಮಾಜಬಾಹಿರ ಶಕ್ತಿಗಳಿಂದ ನಡೆಯುತ್ತಿದೆ. ಇದು ಸಮಾಜದ ಶಾಂತಿ-ಸುವ್ಯವಸ್ಥೆ ಕೆಡಿಸುತ್ತಿದೆ. ಪ್ರಜೆಗಳ ಸಾಂವಿಧಾನಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಸಂಘಟನೆ ಹೇಳಿದೆ.  ಸಂವಿಧಾನಬದ್ದವಾದ ಮೂಲಭೂತ ಹಕ್ಕುಗಳನ್ನು ನಿರ್ಭೀತಿಯಿಂದ ಪಾಲನೆ ಮಾಡಲು ಮತ್ತು ಕಾನೂನಿನ ಚೌಕಟ್ಟಿನೊಳಗೆ ಬಲಿಕರ್ಮಗಳನ್ನು ನಡೆಸಲು ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಸಂಘಟನೆಯು ಮನವಿ ಪತ್ರದಲ್ಲಿ ಆಗ್ರಹಿಸಿದೆ. 

ಮನವಿ ಅರ್ಪಿಸುವ ಸಂದರ್ಭದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾ ಕಾರ್ಯದರ್ಶಿ ಸೈಯದ್ ಅಬ್ದುಲ್ ಬಾಸಿತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News