ಒತ್ತುವರಿ ತೆರವುಗೊಳಿಸದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು: ಕಾವೇರಿಸೇನೆ ಎಚ್ಚರಿಕೆ

Update: 2019-08-01 11:59 GMT

ಮಡಿಕೇರಿ,ಆ.1:ನಗರದ ಅರಣ್ಯ ಭವನದ ಸಮೀಪ ಸುಮಾರು 54 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಕಾನೂನು ಹೋರಾಟ ನಡೆಸಿದ ಫಲವಾಗಿ ಅರಣ್ಯ ಇಲಾಖೆಯು ಮೂರು ತಿಂಗಳ ಒಳಗಾಗಿ ಒತ್ತುವರಿ ತೆರವುಗೊಳಿಸುವುದಾಗಿ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ  ನೀಡಿದೆ ಎಂದು ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒತ್ತುವರಿ ಪ್ರದೇಶವನ್ನು ತೆರವುಗೊಳಿಸದಿದ್ದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಯೊಬ್ಬರು ಸೇರಿದಂತೆ ಸುಮಾರು 68 ಕುಟುಂಬಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ವನ್ಯಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ಕೋರಿ ಕಾವೇರಿಸೇನೆ ಕಳೆದ ಸಾಲಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಈ ಬಗ್ಗೆ ವಿವರಣೆ ಕೇಳಿರುವ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಪ್ರದೇಶ ಒತ್ತುವರಿಯಾಗಿರುವುದನ್ನು ಒಪ್ಪಿಕೊಂಡಿರುವುದಲ್ಲದೆ, ಮುಂದಿನ ಮೂರು ತಿಂಗಳ ಒಳಗಾಗಿ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ ಎಂದರು. 

ಇಲಾಖೆಯ ನ್ಯಾಯವಾದಿಗಳು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಅಂಗೀಕರಿಸಿರುವ ನ್ಯಾಯಾಲಯ ಜಾಗ ತೆರವುಗೊಳಿಸುವಂತೆ ಇಲಾಖೆಗೆ ಸೂಚನೆ ನೀಡಿದೆ. ಅಲ್ಲದೆ ಜಾಗ ಪರಿವರ್ತನೆಯಾಗಿದ್ದಲ್ಲಿ ಆ ಬಗ್ಗೆಯೂ ಮಾಹಿತಿ ನೀಡುವಂತೆ ಆದೇಶಿಸಿದೆ ಎಂದು ರವಿಚಂಗಪ್ಪ ಹೇಳಿದರು.

ಜಾಗ ಪರಿವರ್ತನೆಗೆ  ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಆ.16ಕ್ಕೆ ಮುಂದೂಡಿದ್ದು, ಜಾಗ ತೆರವುಗೊಳಿಸುವಂತೆ ನೀಡಿರುವ ಆದೇಶವು ಕೊಡಗಿನ ಪರಿಸರದ ಉಳಿವಿಗಾಗಿ ಕಾವೇರಿ ಸೇನೆ ನಡೆಸುತ್ತಿರುವ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.

ಜಾಗ ಒತ್ತುವರಿ ಮಾಡಿರುವವರಲ್ಲಿ ಪ್ರಭಾವಿ ಜನಪ್ರತಿನಿಧಿಯೊಬ್ಬರೂ ಸೇರಿದ್ದು, ಅವರು ಆ ಜಾಗದಲ್ಲಿ ಬೃಹತ್ ಬಂಗಲೆ ನಿರ್ಮಿಸುವುದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದಾಗಲಿ, ನಗರಸಭೆಯಿಂದಾಗಲಿ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದು ಆರೋಪಿಸಿದರು.

ಕೊಡಗಿನ ಪರಿಸರ ರಕ್ಷಣೆಗಾಗಿ ಸ್ವಂತ ಹಣದಲ್ಲಿ ಹೋರಾಟ ನಡೆಸುತ್ತಿರುವ ನಮ್ಮನ್ನು ಡೋಂಗಿ ಪರಿಸರವಾದಿಗಳು ಎಂದು ಜರೆಯುವ ಈ ಜನಪ್ರತಿನಿಧಿ ತಾವಾಗಿಯೇ ಮನೆಯನ್ನು ತೆರವುಗೊಳಿಸಿ ಬೇರೆಡೆ ನೆಲೆಸುವುದರೊಂದಿಗೆ ಪರಿಸರದ ಉಳಿವಿಗೆ ನೈಜ ಕಾಳಜಿಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಲಿ ಎಂದು ರವಿ ಚಂಗಪ್ಪ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಹೊಸಬೀಡು ಶಶಿ, ಕೋಲತಂಡ ರಘು ಮಾಚಯ್ಯ, ಮಾಳೆಯಂಡ ಪೂಣಚ್ಚ ಹಾಗೂ ಶೇಷಪ್ಪ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News