ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವ ಹುನ್ನಾರ; ಆರೋಪ

Update: 2019-08-01 18:18 GMT

ಚಿಕ್ಕಮಗಳೂರು, ಆ.1: ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಹಾಗೂ ಡಿ ಗ್ರೂಪ್ ನೌಕರರನ್ನು ಕೆಲಸದಿಂದ ತಗೆಯದಂತೆ ಒತ್ತಾಯಿಸಿ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಹೊರಗುತ್ತಿಗೆ ನೌಕರರು ಹಾಗೂ ಡಿ ಗ್ರೂಪ್ ನೌಕರರು ಗುರುವಾರ ಧರಣಿ ನಡೆಸಿದರು.

ಬಿಎಸ್ಪಿ ಮುಖಂಡ ಕೆ.ಟಿ.ರಾಧಕೃಷ್ಣ, ಸಿಪಿಐ ಪಕ್ಷದ ರಾಧಸುಂದರೇಶ್ ನೇತೃತ್ವದಲ್ಲಿ ನೂರಾರು ನೌಕರರು ನಗರದ ಆಝಾದ್ ಪಾಕ್ ವೃತ್ತದಲ್ಲಿ ಧರಣಿ ನಡೆಸಿ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು  ಹೊರಗುತ್ತಿಗೆ ನೌಕರರ ಉದ್ಯೋಗ ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳ ಮಾತನಾಡಿದ ಮುಖಂಡರು, ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ 29 ಜನರು ಕಳೆದ 10-15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 9 ಜನ ಡಿ ಗ್ರೂಪ್ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 9ಜನ ಡಿ ಗ್ರೂಪ್ ನೌಕರರನ್ನು ಕೆಲಸದಿಂದ ತಗೆದಿದ್ದು, 8ಜನ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಪ್ರಾಮಾಣಿಕ ಸೇವೆ ಮಾಡಿಕೊಂಡು ಬರುತ್ತಿರುವ ಈ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದಲ್ಲಿ ಜೀವನನಿರ್ವಹಣೆ ಕಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ನೌಕರರನ್ನು ಕೆಲಸದಿಂದ ತೆಗೆಯಬಾರದೆಂದು ಒತ್ತಾಯಿಸಿದರು. 

ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ತಮ್ಮ ಕೆಲಸದಿಂದ ಬರುವ ಸಂಬಳ ಹೊರತುಪಡಿಸಿ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ, ನೌಕರರನ್ನು ಕೆಲಸದಿಂದ ತಗೆದರೆ ಜೀವನ ನಡೆಸಲು ಕಷ್ಟವಾಗುತ್ತದೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕಷ್ಟವಾಗುತ್ತದೆ ಎಂದ ಅವರು, ಇತ್ತೀಚೆಗೆ ಕೆಲಸಕ್ಕೆ ಸೇರಿದವರನ್ನು ಕೆಲಸ ಖಾಯಂಗೊಳಿಸಲಾಗಿದೆ. ಆದರೆ  15ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿದೆ. ಕೆಲಸದಿಂದ ತೆಗೆದಿರುವ ಡಿ ಗ್ರೂಪ್ ನೌಕರರು ಹಾಗೂ ಹೊರಗುತ್ತಿಗೆ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇರುವ ಹೊರ ಗುತ್ತಿಗೆ ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು ಎಂದರು.

ಧರಣಿಯಲ್ಲಿ ಹೊರಗುತ್ತಿಗೆ ನೌಕರರಾದ ಕಿರಣ್‍ಕುಮಾರ್, ಯುವರಾಜ, ರುಕ್ಮಿಣ, ಜಯಂತಿ, ಚಂದ್ರಮ್ಮ, ವಿಜಯಮ್ಮ, ಕಲಾವತಿ, ಯಶೋಧ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News