ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆಗೆ ಒತ್ತಾಯಿಸಿ ದಸಂಸ ಧರಣಿ

Update: 2019-08-03 18:03 GMT

ಮೈಸೂರು,ಆ.3: ಕೇಂದ್ರದಲ್ಲಿ ಆರೆಸ್ಸೆಸ್ ಬೆಂಬಲಿತ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಗ್ಗಿಲ್ಲದೆ ದೇಶಾದ್ಯಂತ ಅಹಿಂದ ಅಸಹಾಯಕರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ದಂತಹ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಉನ್ನಾವೊ ಅತ್ಯಾಚಾರ ಪ್ರಕರಣ ದೇಶವೇ ತಲೆತಗ್ಗಿಸುವಂತಹದು ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಪುರಭವನದ ಅಂಬೇಡ್ಕರ್ ಪುತ್ಥಳಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು,ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಉತ್ತರ ಪ್ರದೇಶದ ಉನ್ನಾವೊ ಗ್ರಾಮದ ಸಂತ್ರಸ್ತೆ ಬಾಲಕಿ ಮೇಲೆ ಅತ್ಯಾಚರ ಮಾಡಿ ಕೊಲೆಗೆ ಯತ್ನಿಸಿರುವ ಕೊಲೆಗಡುಕ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗಾರ್ ಮತ್ತು ಸಹಚರರನ್ನು ಗಲ್ಲಿಗೇರಿಸಿ ಅವರ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ಕುಟುಂಬಕ್ಕೆ ವರ್ಗಾಯಸಲು ಅಲ್ಲಿನ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೊದಿ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿದೆ. ಅಹಿಂದ ವರ್ಗಗಳ ಜನರು ಇದರಿಂದ ಎಚ್ಚೆತ್ತುಕೊಂಡು ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಸಂವಿಧಾನ ಬಾಹಿರ ಕೃತ್ಯಗಳು ಅತೀ ಹೆಚ್ಚು ನಡೆಯುತ್ತಿದ್ದು, ಅದನ್ನು ತಡೆಯುವಲ್ಲಿ ವಿಫಲವಾಗಿರುವ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇರಳ ರಾಜ್ಯದ ತ್ರಿಶೂಲ್ ಜಿಲ್ಲೆಯ ಚೀರ್ಪು ಗ್ರಾಮದ ಲೋಕೋಪಯೋಗಿ ಕಚೇರಿ ಎದುರು ದಲಿತ ಸಮುದಾಯದ ಶಾಸಕಿ ಗೀತಾಗೋಪಿ ಯವರು ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಆ ಸ್ಥಳ ಅಪವಿತ್ರವಾಗಿದೆ ಎಂದು ಸ್ಥಳೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಸೆಗಣಿ ವಿಶ್ರಿತ ನೀರಿನಿಂದ ಶುಚಿಗೊಳಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ರದ್ದುಗೊಳಿಸಿ ಅಹಿಂದ ವರ್ಗಗಳ ಜನರ ಭಾವನೆಗೆ ಧಕ್ಕೆಯುಂಟು ಮಾಡಿದೆ. ಮಾನವೀಯದ ಗುಣವುಳ್ಳ ಟಿಪ್ಪು ಸುಲ್ತಾನ್ ರವರು ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಮರಾಠರು ದಾಳಿ ಮಾಡಿದ್ದ ಶೃಂಗೇರಿ ಶಾರದಾ ಪೀಠವನ್ನು ರಕ್ಷಣೆ ಮಾಡಿ ಸಂರಕ್ಷಣೆ ಮಾಡಿದ ಇತಿಹಾಸ ನಮ್ಮ ಮುಂದೆ ಇದೆ. ಅಲ್ಲದೆ ನಾಡಿಗೆ ತನ್ನ ಮಕ್ಕಳನ್ನೇ ಒತ್ತೆಯಿಟ್ಟ ನಾಡಪ್ರೇಮಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದು ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ರದ್ದುಪಡಿಸಿರುವ ಆದೇಶವನ್ನು ಹಿಂಪಡೆಯಲು ಕರ್ನಾಟಕ ರಾಜ್ಯ ಸರಕಾರಕ್ಕೆ ನಿರ್ದೇಶನ ನಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಎಡೆದೊರೆ ಮಹದೇವಯ್ಯ, ಮೂಡಳ್ಳಿ ಮಹದೇವ್, ಶಿವರಾಜ್ ಅರಸಿನಕೆರೆ, ಸಂತೋಷ್ ತಳೂರು, ಕಲ್ಲಹಳ್ಳಿ ಮೂರ್ತಿ, ಸೋಮನಾಯ್ಕ, ಚಿಕ್ಕಸನಾಯಕ, ಪುಟ್ಟನಂಜಯ್ಯ, ಸಿದ್ದರಾಮು, ಶಿವಮೂರ್ತಿ, ಅಣ್ಣಯ್ಯ, ಶಿವರಾಜ್ ಆಲತ್ತೂರು, ಅಶೋಕಪುರಂ ಅಣ್ಣಯ್ಯ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News