ಕೊಡಗಿನಲ್ಲಿ ಮುಂಗಾರು ಚುರುಕು: 'ರೆಡ್ ಅಲರ್ಟ್' ಘೋಷಣೆ

Update: 2019-08-05 13:46 GMT

ಮಡಿಕೇರಿ, ಆ.5 : ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ಸುತ್ತಲಮುತ್ತಲ ಪ್ರದೇಶದಲ್ಲಿ ಆಶ್ಲೇಷ ಮಳೆ ರೈತಾಪಿ ವರ್ಗದಲ್ಲಿ ಆಹ್ಲಾದ ಮೂಡಿಸಿದೆ.

ಕಾವೇರಿ, ಕನ್ನಿಕೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಪೋಕ್ಲು-ಭಾಗಮಂಡಲ ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಭಾಗಮಂಡಲದ ಶ್ರೀ ಭಗಂಡೇಶ್ವರ ಕ್ಷೇತ್ರ ಜಲಾವೃತಗೊಳ್ಳುವ ಸಾಧ್ಯತೆ ಇದೆ.

ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಸೋಮವಾರ ಭಾಗಮಂಡಲಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ರಕ್ಷಣಾ ತಂಡಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಬಳಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿದರು. ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮವಾಗಿ ವೀರಾಜಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರಾಜ್ಯ ಹೆದ್ದಾರಿಯ ಮಾಕುಟ್ಟ ಬಳಿ ರಸ್ತೆ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಳೆದ ಸಾಲಿನಲ್ಲೂ ಮಾಕುಟ್ಟ ರಸ್ತೆಯಲ್ಲೇ ಪ್ರಥಮ ಭೂಕುಸಿತವಾಗಿದ್ದು, ಅದಾದ ಬಳಿಕ ಜಿಲ್ಲೆಯ ವಿವಿಧೆಡೆಗಳಲ್ಲಿ ಭೂಕುಸಿತ, ಜಲ ಪ್ರಳಯ ಸಂಭವಿಸಿದ್ದರಿಂದ ಕೊಡಗಿನ ಜನತೆ ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ ಆ.5ರಿಂದ 7ರ ಬೆಳಗಿನವರೆಗೆ 115.6 ಮಿ.ಮೀ.ನಿಂದ 204.4.ಮಿ.ಮೀ.ನಷ್ಟು ಮಳೆಯಾಗಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಆ.7ರಿಂದ 9ರ ಬೆಳಗಿನವರೆಗೆ ಜಿಲ್ಲೆಯಲ್ಲಿ 204.4ಮಿ.ಮೀ.ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, 9ರ ಬೆಳಗಿನಿಂದ ಆ.10ರ ಬೆಳಗಿನವರೆಗೆ ಮತ್ತೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಕೊಡಗು ಜಿಲ್ಲಾಡಳಿತ ಮನವಿ ಮಾಡಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತ 24*7 ಕಂಟ್ರೋಲ್ ರೂಮ್‍ನ ದೂರವಾಣಿ ಸಂಖ್ಯೆ 08272-221077 ಅಥವಾ ವಾಟ್ಸ್‍ಆಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಸೋಮವಾರ ಬೆಳಗಿನ ಜಾವ ವೀರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಬದಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೀರಾಜಪೇಟೆ ತಹಶೀಲ್ದಾರ್, ಲೋಕೋಪಯೋಗಿ ಇಂಜಿನಿಯರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಅವರು, ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೂರು ದಿನಗಳವರೆಗೆ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮಾಕುಟ್ಟ ಚೆಕ್‍ಪೋಸ್ಟ್ ವರೆಗಿನ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಗೊಳಿಸಿದ ನಂತರ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಿ, ಶಾಶ್ವತವಾಗಿ ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿರುವ ಅವರು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ ಅತಿ ಹೆಚ್ಚು ಅಂದರೆ 154.40 ಮಿ.ಮೀ.ಮಳೆಯಾಗಿದ್ದು, ಉಳಿದಂತೆ ಮಡಿಕೇರಿ ಕಸಬಾ 62.40, ನಾಪೋಕ್ಲು 62.20, ಸಂಪಾಜೆ 44.20, ವೀರಾಜಪೇಟೆ ಕಸಬಾ 69.40, ಹುದಿಕೇರಿ 48.20, ಶ್ರೀಮಂಗಲ 43.20, ಪೊನ್ನಂಪೇಟೆ 100.20, ಅಮ್ಮತ್ತಿ 36.50, ಬಾಳೆಲೆ 48.24, ಸೋಮವಾರಪೇಟೆ ಕಸಬಾ 52.40, ಶನಿವಾರಸಂತೆ 34, ಶಾಂತಳ್ಳಿ 115.20, ಕೊಡ್ಲಿಪೇಟೆ 62.80, ಕುಶಾಲನಗರ 12, ಸುಂಟಿಕೊಪ್ಪ 25 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 80.80, ವೀರಾಜಪೇಟೆ ತಾಲೂಕಿನಲ್ಲಿ 57.62 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 50.23 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 62.88 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನಾಂಕದಂದು 8.15 ಮಿ.ಮೀ. ಮಳೆಯಾಗಿತ್ತು.

ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ 1461.11 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 3710 ಮಿ.ಮೀ.)  ವೀರಾಜಪೇಟೆ ತಾಲೂಕಿನಲ್ಲಿ 1134.64 ಮಿ.ಮೀ. ( 2094.64 ಮಿ.ಮೀ.) ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 649.81 ಮಿ.ಮೀ. ( 2083.72 ಮಿ.ಮೀ.) ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 1081.85 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 2629.45 ಮಿ.ಮಿ) ಮಳೆಯಾದಂತಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದ  2833.29 ಅಡಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ  2857.71 ಅಡಿ ನೀರು ಸಂಗ್ರಹವಾಗಿತ್ತು. ಪ್ರಸಕ್ತ ಜಲಾಶಯಕ್ಕೆ 1230 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 5662 ಕ್ಯುಸೆಕ್‍ನಷ್ಟಿತ್ತು. ಇದೀಗ ಜಲಾಶಯದಿಂದ ನದಿಗೆ 30 ಕ್ಯುಸೆಕ್, ನಾಲೆಗೆ 1200 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನದಿಗೆ 2867, ನಾಲೆಗೆ 1000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News