ಕರ್ನಾಟಕ ನೀರಿನಲ್ಲಿ ಮುಳುಗಿದೆ, ಬಿಜೆಪಿ-ಆರೆಸೆಸ್ಸ್‌ ಕಿತ್ತಾಟದಲ್ಲಿ ಮುಳುಗಿದೆ: ಕಾಂಗ್ರೆಸ್ ವಾಗ್ದಾಳಿ

Update: 2019-08-07 12:45 GMT

ಬೆಂಗಳೂರು, ಆ. 7: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕರ್ನಾಟಕ ಅಕ್ಷರಶಃ ನೀರಿನಲ್ಲಿ ಮುಳುಗಿದೆ. ಆದರೆ, ಬಿಜೆಪಿ ಮತ್ತು ಆರೆಸೆಸ್ಸ್‌ನವರು ಅಧಿಕಾರ ಹಂಚಿಕೆಯಲ್ಲಿ ಕಿತ್ತಾಟದಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬಿಜೆಪಿ ಮತ್ತು ಆರೆಸೆಸ್ಸ್‌ನವರು ಅಧಿಕಾರ ಹಂಚಿಕೆಯಲ್ಲಿ ಮುಳುಗಿದರೆ, ಮಾಧ್ಯಮದವರು ಕಾಶ್ಮೀರದಲ್ಲಿ ಮುಳುಗಿದ್ದಾರೆ, ಏಕವ್ಯಕ್ತಿಯ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಟ್ವಿಟ್ಟರ್ ಮೂಲಕ ಕಾಂಗ್ರೆಸ್ ಲೇವಡಿ ಮಾಡಿದೆ.

ಕರ್ನಾಟಕ ನೀರಿನಲ್ಲಿ ಮುಳುಗಿದೆ, ಮತದಾರರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕಾಯುತ್ತಿರಿ ರಾಜ್ಯ ಸರಕಾರ ಶವವಾಗಿ ತೇಲಲಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಸಿಎಂ ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯ ವ್ಯವಹಾರಕ್ಕಾಗಿ ಹೊಸದಿಲ್ಲಿಯಲ್ಲಿದ್ದಾರೆ. ಬಿಜೆಪಿ ಸರಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಮುಖ್ಯವೋ ಅಥವಾ ತುರ್ತಾಗಿ ಎದುರಾಗಿರುವ ನೆರೆ ಪರಿಹಾರ ಮುಖ್ಯವೋ ಎಂದು ಪ್ರಶ್ನಿಸಿದ್ದು, ಬಿಎಸ್‌ವೈ ಮತ್ತೊಮ್ಮೆ ತಮ್ಮದು ಅಪೂರ್ಣ ಸರಕಾರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಅಧಿಕಾರ ಹಂಚಿಕೆ ಬಿಜೆಪಿಗೆ ಹೆಚ್ಚಿನ ಆದ್ಯತೆ ಇದ್ದಂತಿದೆ. ಜನಸಾಮಾನ್ಯರು ನೆರೆಯಿಂದಾಗಿ ಸಂತ್ರಸ್ತರಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸಿಎಂ ತಾವೊಬ್ಬರೇ ಕೆಲಸ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಜನರ ಕಷ್ಟಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

‘ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ. ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಝರಿತವಾಗಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಕರ್ನಾಟಕದಲ್ಲಿ ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ. ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ..’

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News