ಮಲೆನಾಡಿನಲ್ಲಿ ಮುಂದುವರೆದ ವರ್ಷಧಾರೆಯ ಆರ್ಭಟ: ಉಕ್ಕಿ ಹರಿಯುತ್ತಿರುವ ನದಿಗಳು, ಪ್ರವಾಹ ಭೀತಿ

Update: 2019-08-07 15:17 GMT

ಶಿವಮೊಗ್ಗ, ಆ.7: ಮಲೆನಾಡಿನಲ್ಲಿ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯಾದ್ಯಂತ ನದಿ, ಹಳ್ಳಕೊಳ್ಳ, ನಾಲೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಸಿವೆ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಎಲ್ಲೆಂದರಲ್ಲಿ ಮನೆ, ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. 

ಮಳೆ ಸಂಬಂಧಿತ ಅನಾಹುತಗಳಲ್ಲಿ ಓರ್ವ ಮೃತಪಟ್ಟು, ಮತ್ತೋರ್ವರು ಗಾಯಗೊಂಡಿದ್ದಾರೆ. ಭಾರೀ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಪ್ರವಾಹ ಸ್ಥಿತಿ ತಲೆದೋರಿರುವ ಸ್ಥಳಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಗಂಜಿಕೇಂದ್ರಗಳನ್ನು ತೆರೆದು ಆಶ್ರಯ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಕೂಡ ಜಿಲ್ಲೆಯ ಎಲ್ಲ ಶಾಲಾ - ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. 

ಜಿಲ್ಲೆಯ ಜೀವ ನದಿಗಳಾದ ತುಂಗಾ, ಭದ್ರಾ, ಶರಾವತಿ, ವರದಾ, ಕುಮದ್ವತಿ, ದಂಡಾವತಿ ಸೇರಿದಂತೆ ಸಣ್ಣಪುಟ್ಟ ನದಿಗಳು ಉಕ್ಕಿ ಹರಿಯುತ್ತಿವೆ. ನದಿಪಾತ್ರದ ಕೆಲವೆಡೆ ಪ್ರವಾಹ ಸೃಷ್ಟಿಸಿವೆ. ವಿಶೇಷವಾಗಿ ಸಾಗರ, ಸೊರಬ ತಾಲೂಕುಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 

ಸಾಗರ ತಾಲೂಕಿನಲ್ಲಿ 2150 ಹೆಕ್ಟೇರ್, ಸೊರಬ ತಾಲೂಕಿನಲ್ಲಿ 2239 ಹೆಕ್ಟೇರ್, ಹೊಸನಗರ ತಾಲೂಕಿನಲ್ಲಿ 58 ಹೆಕ್ಟೇರ್ ಹಾಗೂ ಶಿಕಾರಿಪುರ ತಾಲೂಕಿನಲ್ಲಿ 6.4 ಹೆಕ್ಟೇರ್ ಭೂ ಪ್ರದೇಶ ಜಲಾವೃತವಾಗಿದೆ. ಅಲ್ಲದೇ ಶಿವಮೊಗ್ಗ ತಾಲೂಕಿನಲ್ಲಿ 19 ಮನೆಗಳು, ಭದ್ರಾವತಿಯಲ್ಲಿ 27 ಮನೆಗಳು, ಸಾಗರ ತಾಲೂಕಿನಲ್ಲಿ ಸುಮಾರು 22 ಮನೆಗಳು, ತೀರ್ಥಹಳ್ಳಿಯಲ್ಲಿ 8 ಮನೆಗಳು, ಸೊರಬ ತಾಲೂಕಿನಲ್ಲಿ 10 ಮನೆಗಳು ಹಾಗೂ ಹೊಸನಗರ ತಾಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ, ತೀರ್ಥಹಳ್ಳಿ ತಾಲೂಕು ಭಾಗಗಳಲ್ಲಿ ಗಾಳಿ-ಮಳೆಗೆ ಭಾರೀ ಪ್ರಮಾಣದ ಮರಗಳು ಉರುಳಿ ಬಿದ್ದಿವೆ. ಹಾಗೆಯೇ ಸುಮಾರು 100 ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. 

ಜಿಲ್ಲೆಯ ಹಲವೆಡೆ ರಸ್ತೆಗಳ ಮೇಲೆ ಮರಗಳು ಉರುಳಿ ಬೀಳುತ್ತಿರುವುದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬುಧವಾರ ಬೆಳಿಗ್ಗೆ ಸಾಗರದ ತಾಲೂಕಿನ ಜೋಗಿನಗದ್ದೆಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೃಹದಾಕಾರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. 

ಶಿವಮೊಗ್ಗ ವರದಿ: ಗಾಜನೂರಿನ ತುಂಗಾ ಜಲಾಶಯದಿಂದ ಸುಮಾರು 95 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದ ಕೆಲವೆಡೆ ಪ್ರವಾಹ ಉಂಟಾಗಿದೆ. ಅಪಾಯದ ಮಟ್ಟ ತೋರಿಸುವ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ನದಿಯಲ್ಲಿ ಮುಳುಗಿದೆ. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳು ಜಲಾವೃತವಾಗಿವೆ. 

ನಗರದ ಕುಂಬಾರಗುಂಡಿ, ಇಮಾಮ್‍ ಬಾಡ, ಮಂಡಕ್ಕಿಭಟ್ಟಿ, ಸೀಗೆಹಟ್ಟಿ, ವಾದಿ ಎ ಹುದಾ, ಭಾರತಿ ಕಾಲೋನಿ ಸಂಪೂರ್ಣ ಜಲಾವೃತವಾಗಿವೆ. ನಗರದ ಶಾಂತಮ್ಮ ಲೇಔಟ್, ಚಿಕ್ಕಲ್, ರಾಗಿಗುಡ್ಡ ಹಾಗೂ ತಾಲೂಕು ಕಚೇರಿ ಸಮೀಪದಲ್ಲಿ ಮರಗಳು ಧರೆಗುರುಳಿವೆ. ಬಸವನಗುಡಿಯಲ್ಲಿ ಯುಜಿಡಿ ಬ್ಲಾಕ್ ಆಗಿದೆ. ನಗರದ ಹಲವೆಡೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಮಹಾನಗರ ಪಾಲಿಕೆ ಆಡಳಿತ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದು, ಸಹಾಯವಾಣಿ ಕೇಂದ್ರ ತೆರೆದಿದೆ. 
ನಗರದ ಶಿವಪ್ಪನಾಯಕ ಅರಮನೆ ಬಳಿ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದೆ. ಇದರಿಂದ ಪುರಾತನ ಕಾಲದ ಸುಮಾರು 10 ರಿಂದ 12 ವಿಗ್ರಹಗಳು ಪೀಠದಿಂದ ಕೆಳಕ್ಕೆ ಬಿದ್ದಿದೆ. ಆದರೆ ಯಾವುದೇ ಹಾನಿಯಾಗಿಲ್ಲವೆಂದು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಡಿ.ಸಿ. ಭೇಟಿ: ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಬಿ.ಶಿವಕುಮಾರ್ ಅವರು ಮಳೆಹಾನಿಗೊಳಗಾದ ಶಿವಮೊಗ್ಗ ನಗರದ ಆಯ್ದ ಸ್ಥಳಗಳಿಗೆ ಉಪವಿಭಾಗಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡಸಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ತಹಶೀಲ್ದಾರರು ಹಾಗೂ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಸೊರಬ ತಾಲೂಕಿನ 4 ಗ್ರಾಮಗಳಲ್ಲಿ, ಶಿಕಾರಿಪುರ ತಾಲೂಕಿನ 5 ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಮೆಸ್ಕಾಂ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News