ಕಡೂರು: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಸಾರಿಗೆ ಬಸ್

Update: 2019-08-07 17:38 GMT

ಕಡೂರು, ಆ.7: ಪಟ್ಟಣ ಸಮೀಪದ ಕೆ.ಎಂ. ರಸ್ತೆಯ ಎಚ್.ಪಿ. ಪೆಟ್ರೊಲ್‍ ಬಂಕ್ ಬಳಿ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮಂಗಳೂರು-ಬಿ.ಸಿ.ರೋಡ್ ಘಟಕಕ್ಕೆ ಸೇರಿದ ಬಸ್ ಮಂಗಳೂರು ಕಡೆಯಿಂದ ದಾವಣಗೆರೆ ಕಡೆ ತೆರಳುತ್ತಿತ್ತು. ಪಟ್ಟಣಕ್ಕೆ ಸಮೀಪಿಸುತ್ತಿದ್ದಂತೆ ಕೆ.ಎಂ. ರಸ್ತೆಯ ಅಗಲೀಕರಣದ ಹಿನ್ನಲೆಯಲ್ಲಿ ಕೆಸರಿನಿಂದ ಅವೃತವಾದ ರಸ್ತೆಯಲ್ಲಿ ಬಸ್ ನ ಚಕ್ರಗಳು ನಿಯಂತ್ರಣಕ್ಕೆ ಬಾರದೆ ಬಸ್ ನೆಲಕ್ಕೆ ಉರುಳಿದೆ. 

ಕೂಡಲೇ ಹಿಂಬದಿಯಿಂದ ಬರುತ್ತಿದ್ದ ವಾಹನಗಳ ಚಾಲಕರ ಸಹಾಯದಿಂದ ಬಸ್ಸಿನ ಹಿಂಬದಿ ಮತ್ತು ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿ ಪ್ರಯಾಣಿಕರನ್ನು ರಕ್ಷಿಸಿದರು. ಬಸ್‍ನಲ್ಲಿ ಸುಮಾರು 24 ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿದ್ದು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ.

ಸ್ಥಳಕ್ಕೆ ಕಡೂರು ಘಟಕದ ಡಿಪೋ ಮ್ಯಾನೇಜರ್ ಚನ್ನಬಸಪ್ಪ, ಪೊಲೀಸ್ ಉಪನಿರೀಕ್ಷಕ ವಿಶ್ವನಾಥ್ ಮತ್ತು ಸಿಬ್ಬಂದಿ ವರ್ಗ ಭೇಟಿ, ರಸ್ತೆಯಲ್ಲಿ ಮಗುಚಿ ಬಿದ್ದಿದ್ದ ಬಸ್‍ನ್ನು ಕ್ರೇನ್ ಸಹಾಯದಿಂದ ಎತ್ತಿ, ಟ್ರಾಫಿಕ್ ದಟ್ಟಣೆಯಿಂದ ಕೂಡಿರುವ ಸಂಚಾರವನ್ನು ಸುಗಮಗೊಳಿಸಿದರು.

ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಯಾವುದೇ ಸೂಚನಫಲಕಗಳು ಇಲ್ಲದೆ ಇರುವುದು ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಗಳು ಉದ್ಬವಾಗುತ್ತವೆ. ರಾತ್ರಿ ಸಮಯದಲ್ಲಿ ಯಾವುದೇ ಸೂಚನೆಗಳು ಇಲ್ಲದೆ ಮಳೆಯಿಂದ ಕೆಸರಿನಿಂದ ಆವೃತವಾದ ರಸ್ತೆಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುವುದು ಹೆಚ್ಚಾಗಿದ್ದು, ಈ ಕೂಡಲೇ ಸಂಬಂಧಿಸಿದ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ಅಗಲೀಕರಣದ ಕಾರ್ಯದಲ್ಲಿ ರಸ್ತೆಯ ಸೂಚನಾಫಲಕಗಳನ್ನು ಅಳವಡಿಸಿಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News