ಕೊಡಗಿನಲ್ಲಿ ಮುಂದುವರಿದ ಮಳೆ: ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮ

Update: 2019-08-07 18:32 GMT

ಮಡಿಕೇರಿ, ಆ.7: 2019ನೇ ಮುಂಗಾರು ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಸಮಸ್ಯೆಗಳು ಮತ್ತು ಅದಕ್ಕೆ ಜಿಲ್ಲಾಡಳಿತದಿಂದ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಒದಗಿಸಿದ್ದಾರೆ.

ಕೊಡಗು ಜಿಲ್ಲೆಗೆ ಜೂನ್ ಮೊದಲನೇ ವಾರದಲ್ಲಿ ಮುಂಗಾರು ಕಾಲಿರಿಸಿದ್ದು, ಜೂನ್ ಮಾಹೆಯ ಅಂತ್ಯದವರೆಗೂ ಜಿಲ್ಲೆಯಲ್ಲಿ ಮುಂಗಾರು ಕ್ಷೀಣವಾಗಿ ಮುಂದುವರೆದಿತು. ಆದರೆ ಜುಲೈ ಮಾಹೆಯಲ್ಲಿ ಮುಂಗಾರು ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಚುರುಕುಗೊಂಡಿದೆ.  

ಜಿಲ್ಲೆಯಾದ್ಯಂತ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ 24*7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸಾಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.

ಮಳೆಹಾನಿ ವಿವರ

ಜಾನುವಾರು ಪ್ರಾಣ ಹಾನಿ ಒಟ್ಟು 10: ಸೋಮವಾರಪೇಟೆ ತಾಲೂಕಿನಲ್ಲಿ 10 ಆಡುಗಳು ಅತಿವೃಷ್ಟಿಯಿಂದ ಮೃತಪಟ್ಟಿರುತ್ತದೆ. ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಒಟ್ಟು ರೂ.30 ಸಾವಿರಗಳನ್ನು ಸಂಬಂಧಪಟ್ಟ ಮಾಲೀಕರುಗಳಿಗೆ ಪಾವತಿಸಲಾಗಿದೆ.

ವಾಸದ ಮನೆ ಹಾನಿ ಒಟ್ಟು 11: ಮಡಿಕೇರಿ ತಾಲೂಕಿನಲ್ಲಿ 11 ಮನೆಗಳಿಗೆ ಹಾನಿಯಾಗಿದ್ದು, ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಒಟ್ಟು ರೂ.3,68,802 ಗಳನ್ನು ಸಂಬಂಧಪಟ್ಟ ಸಂತ್ರಸ್ತರಿಗೆ ಪಾವತಿಸಲಾಗಿದೆ. 

ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳು: ವಿರಾಜಪೇಟೆ-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಭಾರೀ ಮಳೆಯಿಂದ ರಸ್ತೆ ಕುಸಿದಿದ್ದು, ತುರ್ತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಿಧದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಅಲ್ಲದೆ ಕುಸಿದು ಹೋದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗುತ್ತಿದೆ. ತಾತ್ಕಾಲಿಕ ರಸ್ತೆ ಕಾಮಗಾರಿ ಪೂರ್ಣಗೊಂಡ ತಕ್ಷಣ ಶಾಶ್ವತ ಕಾಮಗಾರಿಗೆ ಚಾಲನೆ ನೀಡಲಾಗುವುದು. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಆಗುತ್ತಿರುವ ಭಾರೀ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಮಡಿಕೇರಿ-ಭಾಗಮಂಡಲ ಮತ್ತು ನಾಪೋಕ್ಲು-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸ್ಥಳದಲ್ಲಿ ಅಗ್ನಿಶಾಮಕ, ಗೃಹರಕ್ಷಕ ದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಪೈಬರ್ ಬೋಟ್ ಮತ್ತು ರಿವರ್‍ರಾಫ್ಟ್ ಬಳಸಿ ಸಾರ್ವಜನಿಕರನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿಸಲಾಗುತ್ತಿದೆ. ಹೋಂ ಗಾರ್ಡ್ ಸಿಬ್ಬಂದಿಗಳು ಸ್ಥಳದಲ್ಲಿ 24*7 ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳಷ್ಟೇ ಅಲ್ಲದೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಣ್ಣ ಪುಟ್ಟ ಭೂ ಕುಸಿತಗಳು ಉಂಟಾಗುತ್ತಿದ್ದು, ತಕ್ಷಣವೇ ಅವುಗಳನ್ನು ಸಂಬಂಧಪಟ್ಟ ಇಲಾಖೆಗಳ ಮುಖಾಂತರ ತೆರವುಗೊಳಿಸಲಾಗುತ್ತಿದೆ.

ಹಾಗೆಯೇ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬ, ಲೈನ್‍ಗಳು ನೆಲ ಕಚ್ಚಿದ್ದು, ತಕ್ಷಣವೇ ಸೆಸ್ಕ್ ಇಲಾಖೆಯಿಂದ ಕ್ರಮ ವಹಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೆಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಅಗ್ನಿಶಾಮಕ ಮತ್ತು ಸ್ಥಳೀಯ ಪ್ರಾಧಿಕಾರಗಳಿಂದ ತಕ್ಷಣವೇ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಅಪಾಯಕಾರಿಯಾಗಿರುವ, ವಿದ್ಯುತ್ ಲೈನ್‍ಗಳ ಮೇಲೆ ಬಾಗಿರುವ ಮರದ ಕೊಂಬೆ ತೆಗೆಯಲು ಮನವಿಗಳು ಬಂದಿದ್ದು, ಅರಣ್ಯ ಇಲಾಖೆ ಮತ್ತು ಚೆಸ್ಕಾಂ ಇಲಾಖೆಯವರ ಸಹಕಾರದೊಂದಿಗೆ ಮರದ  ಕೊಂಬೆಗಳನ್ನು ತೆಗೆಯಲು ಆದ್ಯತೆ ಮೇಲೆ ಕ್ರಮ ವಹಿಸಲಾಗುತ್ತಿದೆ. 

ಕಂಟ್ರೋಲ್ ರೂಂ
ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ :08272-221077 ಮತ್ತು ವಾಟ್ಸಪ್ ನಂ.8550001077ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News