ಶಿವಮೊಗ್ಗದಲ್ಲಿ ತಗ್ಗದ ವರ್ಷಧಾರೆಯ ಅಬ್ಬರ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

Update: 2019-08-08 17:02 GMT

ಶಿವಮೊಗ್ಗ, ಆ. 8: ಮಲೆನಾಡಿನಲ್ಲಿ ವರ್ಷಧಾರೆಯ ಅಬ್ಬರ ಮುಂದುವರಿದಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಬೀಳುತ್ತಿರುವ ವರ್ಷಧಾರೆಗೆ, ನಾಗರಿಕರು ತತ್ತರಿಸಿ ಹೋಗಿದ್ದಾರೆ. ದೈನಂದಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಗುರುವಾರ ಕೂಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಹಲವೆಡೆ ಗುಡುಗು, ಗಾಳಿ ಸಹಿತ ಬೀಳುತ್ತಿರುವ ಧಾರಾಕಾರ ಮಳೆಯು ಜನರನ್ನು ಭಯಭೀತರನ್ನಾಗಿಸಿದೆ. ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಲೆಕ್ಕವಿಲ್ಲದಷ್ಟು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ನೂರಾರು ಮನೆಗಳು ಉರುಳಿ ಬಿದ್ದಿವೆ. ಹಲವೆಡೆ ಪ್ರವಾಹ ಸ್ಥಿತಿ ಮುಂದುವರಿದಿದೆ. 

ಈ ನಡುವೆ ಹೆಚ್ಚುತ್ತಿರುವ ಮುಸಲಧಾರೆ ಹಾಗೂ ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಎನ್.ಡಿ.ಆರ್.ಎಫ್. ತಂಡ ಕಳುಹಿಸಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

'ಮಳೆಯ ಪ್ರಮಾಣ ಹೆಚ್ಚಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಭೀತಿ ಎದುರಾಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುತ್ತಿದೆ. ಈ ಕಾರ್ಯವನ್ನು ಮತ್ತಷ್ಟು ತ್ವರಿತವಾಗಿ ಕೈಗೊಳ್ಳಲು ಎನ್.ಡಿ.ಆರ್.ಎಫ್/ಎಸ್‍ಡಿಆರ್‍ಎಫ್ ತಂಡವನ್ನು ಜಿಲ್ಲೆಗೆ ನಿಯೋಜಿಸುವಂತೆ' ಮನವಿ ಮಾಡಿದ್ದಾರೆ. ಲಭ್ಯ ಮಾಹಿತಿ ಅನುಸಾರ ಶೀಘ್ರದಲ್ಲಿಯೇ ಜಿಲ್ಲೆಗೆ ಎನ್.ಡಿ.ಆರ್.ಎಫ್ ತಂಡ ಆಗಮಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

ಕುಸಿತ: ಜಿಲ್ಲೆಯ ತಡಸ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕೊಠಡಿಯೊಂದು ಕುಸಿದು ಬಿದ್ದಿದೆ. ಶಾಲೆಗೆ ರಜೆ ಘೋಷಿಸಿದ್ದ ಕಾರಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನೊಂದೆಡೆ ಹೊಸನಗರ ತಾಲೂಕು ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 76 ರ ಬೈಂದೂರು- ರಾಣೆಬೆನ್ನೂರು ಹೆದ್ದಾರಿಯ ನಾಗೋಡಿ ಗ್ರಾಮದ ಬಳಿ ಭೂ ಕುಸಿತ ಉಂಟಾಗಿದೆ. ಈ ಕಾರಣದಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಗರ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರದ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಭದ್ರಾವತಿ ತಾಲೂಕಿನ ಕುಮಾರನಹಳ್ಳಿ ಕೆರೆ ದಡ ಒಡೆದಿದೆ. ಸೊರಬ ತಾಲೂಕಿನ ಆನವಟ್ಟಿ-ಕಾತುವಳ್ಳಿ ರಸ್ತೆಯೂ ಹಾನಿಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಐದು ಸೇತುವೆಗಳಿಗೆ ಧಕ್ಕೆಯಾಗಿದೆ. ಹೊಸನಗರ, ಸೊರಬ, ಸಾಗರ ತಾಲೂಕಿನ ಹಲವೆಡೆ ರಸ್ತೆ, ಸೇತುವೆಗಳು ಜಲಾವೃತವಾಗಿರುವ ವರದಿಗಳು ಬಂದಿವೆ. 

ಅಸ್ತವ್ಯಸ್ತ: ಶಿವಮೊಗ್ಗ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಪಾತ್ರದ ಹಲವು ಬಡಾವಣೆಗಳಲ್ಲಿ ಜಲಾವೃತ ಸ್ಥಿತಿ ಮುಂದುವರಿದಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. 

ಸಾಗರ ಪಟ್ಟಣದ ಹಲವೆಡೆ ಜಲಾವೃತ ಸ್ಥಿತಿ ಮುಂದುವರಿದ್ದು, ಕೆಲ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ. ಹೊಸನಗರ ತಾಲೂಕಿನ ಬಟಾಣಿ ಜೆಡ್ಡು ಗ್ರಾಮದಲ್ಲಿ ಕುಮದ್ವತಿ ನದಿ ನೀರು ಸೇತುವೆಯ ಮೇಲೆ ಹರಿಯುತ್ತಿದೆ. 

ಪ್ರವಾಹ: ಜಿಲ್ಲೆಯ ಜೀವ ನದಿಗಳಾದ ತುಂಗಾ, ಭದ್ರಾ, ಶರಾವತಿ, ಕುಮದ್ವತಿ, ವರದಾ, ದಂಡಾವತಿ ಸೇರಿದಂತೆ ಸಣ್ಣಪುಟ್ಟ ನದಿಗಳು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ತುಂಗಾ, ಶರಾವತಿ, ಕುಮದ್ವತಿ, ವರದಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹ ಸೃಷ್ಟಿಸಿವೆ. 

201 ಮನೆಗಳಿಗೆ ಹಾನಿ, 7748 ಹೆಕ್ಟೇರ್ ಜಲಾವೃತ
ಕಳೆದ ಆ.1 ರಿಂದ 7 ರವರೆಗೆ ಮಳೆಯಿಂದ ಜಿಲ್ಲೆಯಲ್ಲಿ ಒಟ್ಟಾರೆ 201 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಶಿವಮೊಗ ತಾಲೂಕಿನಲ್ಲಿ 43, ಸಾಗರ 20, ಭದ್ರಾವತಿ 40, ತೀರ್ಥಹಳ್ಳಿ 14, ಶಿಕಾರಿಪುರ 41, ಸೊರಬ 22 ಹಾಗೂ ಹೊಸನಗರ ತಾಲೂಕಿನಲ್ಲಿ 21 ಮನೆಗಳಿಗೆ ಧಕ್ಕೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ಉಳಿದಂತೆ ಮಳೆಯಿಂದ ಆ.7 ರವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 7748 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 4.40 ಹೆಕ್ಟೇರ್, ಸಾಗರದಲ್ಲಿ 2886, ಭದ್ರಾವತಿ 3.07, ತೀರ್ಥಹಳ್ಳಿ 150, ಶಿಕಾರಿಪುರ 16.20, ಸೊರಬ 3841, ಹೊಸನಗರ ತಾಲೂಕಿನಲ್ಲಿ 648.10 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. 

ತೀರ್ಥಹಳ್ಳಿ ತಾಲೂಕಿನಲ್ಲಿ 5 ಸೇತುವೆಗಳು ಜಲಾವೃತವಾಗಿವೆ. ಶಿವಮೊಗ್ಗ ನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೊಸನಗರ ತಾಲೂಕಿನಲ್ಲಿ 2 ಕುಟುಂಬಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಕೂಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. 

1 ದಿನದಲ್ಲಿ ಲಿಂಗನಮಕ್ಕಿಗೆ 4, ಭದ್ರಾ ಡ್ಯಾಂಗೆ 5 ಅಡಿ ನೀರು!
ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವದಿಯಲ್ಲಿ ಲಿಂಗನಮಕ್ಕಿಗೆ 4 ಹಾಗೂ ಭದ್ರಾ ಡ್ಯಾಂನಲ್ಲಿ 5 ಅಡಿಯಷ್ಟು ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1799.35 (ಗರಿಷ್ಠ ಮಟ್ಟ : 1819) ಅಡಿಯಿದೆ. 1,11,218 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ 104.40 ಮಿ.ಮೀ. ಮಳೆಯಾಗಿದೆ. 

ಭದ್ರಾ ಡ್ಯಾಂನ ನೀರಿನ ಮಟ್ಟ 159.80 (ಗರಿಷ್ಠ ಮಟ್ಟ : 186) ಅಡಿಯಿದೆ. 55,915 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. ಪ್ರಸ್ತುತ 86,130 ಕ್ಯೂಸೆಕ್ ಒಳಹರಿವಿದ್ದು, 85,590 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

ನೆರೆಪೀಡಿತ ಪ್ರದೇಶಗಳಿಗೆ ಭೇಟಿ
ಶಿವಮೊಗ್ಗ ನಗರದ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಮ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಸ್ಥಳೀಯ ನಾಗರೀಕರ ಜೊತೆ ಸಮಾಲೋಚನೆ ನಡೆಸಿದರು. ನೆರೆ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಎಲ್ಲ ರೀತಿಯ ನೆರವು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಶಿವಮೊಗ್ಗ ಪಾಲಿಕೆ ಆಯುಕ್ತೆಯ ಜನಪರ ಕಾಳಜಿ
ಶಿವಮೊಗ್ಗ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಜಕಾಲುವೆ-ಚರಂಡಿಗಳು ಉಕ್ಕಿ ಹರಿಯುತ್ತಿವೆ. ತುಂಗಾ ನದಿಯ ಪ್ರವಾಹದಿಂದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದೊಡ್ಡ ಸಂಖ್ಯೆಯ ಮನೆಗಳಿಗೆ ನೀರು ನುಗ್ಗಿದೆ. ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಹಲವೆಡೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. 

ಈ ನಡುವೆ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರ ದಕ್ಷ ಕಾರ್ಯನಿರ್ವಹಣೆ, ಜನಪರ ಕಾಳಜಿ ಹಾಗೂ ತುರ್ತು ಸ್ಪಂದನೆಯ ಕಾರಣದಿಂದ ನಾಗರಿಕರ ಸಂಕಷ್ಟ ಕಡಿಮೆಯಾಗುವಂತಾಗಿದೆ. ಹಲವು ಜಲಾವೃತ ಬಡಾವಣೆಗಳ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. 
ಆಯುಕ್ತೆ ಚಾರುಲತಾ ಸೋಮಲ್‍ರವರು ಜಲಾವೃತ ಪ್ರದೇಶಗಳಿಗೆ ಖುದ್ದು ಭೇಟಿಯಿತ್ತು ಪರಿಶೀಲಿಸುತ್ತಿದ್ದಾರೆ. ತಾವೇ ಮುಂದೆ ನಿಂತು ಸಮರೋಪಾದಿಯಲ್ಲಿ ಸಮಸ್ಯೆ ಪರಿಹರಿಸುತ್ತಿದ್ದಾರೆ. ಹಗಲಿರುಳು ನಗರ ಸುತ್ತು ಹಾಕುತ್ತಿದ್ದಾರೆ. ಗಂಜಿ ಕೇಂದ್ರಗಳಿಗೆ ಭೇಟಿಯಿತ್ತು ಅಲ್ಲಿನ ಸೌಲಭ್ಯ ಪರಿಶೀಲಿಸುತ್ತಿದ್ದಾರೆ. 

ಜೊತೆಗೆ ಯಾವುದೇ ಆರೋಪ, ಗೊಂದಲಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಿಸುವಂತೆ ತಮ್ಮ ಕೆಳಹಂತದ ಅಧಿಕಾರಿ-ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಈ ಕಾರಣದಿಂದ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಸ್ಯೆ ಕಂಡುಬರುವ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ದೌಡಾಯಿಸಿ, ನೆರವಿನ ಹಸ್ತ ಚಾಚುತ್ತಿದ್ದಾರೆ. ಇದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News