ಬಾದಾಮಿ ಪ್ರವಾಸಕ್ಕೆ ತೆರಳಿದ್ದ ಉಡುಪಿಯ 42 ವಿದ್ಯಾರ್ಥಿಗಳ ರಕ್ಷಣೆ

Update: 2019-08-09 13:16 GMT
ಸಾಂದರ್ಭಿಕ ಚಿತ್ರ

ಬಾಗಲಕೋಟೆ, ಆ.9: ಹವಾಮಾನ ಇಲಾಖೆಯ ಎಚ್ಚರಿಕೆಯ ಸಂದೇಶದ ನಡುವೆಯೂ ಬಾದಾಮಿ ಪ್ರವಾಸಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿದ್ದ ಉಡುಪಿಯ ಮಣಿಪಾಲ್ ಕಾಲೇಜಿನ 42 ವಿದ್ಯಾರ್ಥಿಗಳನ್ನು ರಕ್ಷಣಾ ತಂಡ ರಕ್ಷಿಸಿ ಹೊಸೂರು ಗ್ರಾಮಕ್ಕೆ ರವಾನಿಸಿತು. ಬಾದಾಮಿಯ ಹೊಸೂರು ಬ್ರಿಡ್ಜ್ ಮೂಲಕ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರವಾಹ ಉಂಟಾಗಿದೆ. ಈ ವೇಳೆ ರಕ್ಷಣಾ ತಂಡದವರು ಬಂದು ರಕ್ಷಣೆ ಮಾಡಿ ಹೊಸೂರು ಗ್ರಾಮಕ್ಕೆ ರವಾನಿಸಿದ್ದಾರೆ. 

ವಿದ್ಯಾರ್ಥಿಗಳ ತಂಡದಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪುತ್ರಿ ಅವಂತಿಕಾ ಸೂದ್ ಕೂಡ ಇದ್ದರು. ವಿದ್ಯಾರ್ಥಿ ಅವಂತಿಕಾ ಮಣಿಪಾಲದಲ್ಲಿ ಆರ್ಕಿಟೆಕ್ಟ್ ವಿಷಯದಲ್ಲಿ ಎರಡನೆ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದರು.

ಪ್ರವಾಸದ  ಬಸ್ ಶುಕ್ರವಾರ ಬೆಳಗಿನ ಜಾವ 3.30ರ ವೇಳೆ ಬಾದಾಮಿಯ ಹೊಸೂರು ಬಳಿಯ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ವಿಷಯ ತಿಳಿದ ಹೊಸೂರು ಗ್ರಾಮಸ್ಥರು ವಿದ್ಯಾರ್ಥಿಗಳ ತಂಡಕ್ಕೆ ಅಲ್ಲಿನ ಸಮುದಾಯ ಭವನದಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿದ್ದರು. ಬೆಳಗಿನ ಜಾವ ಎಲ್ಲರಿಗೂ ಉಪಾಹಾರಕ್ಕೆ ಉಪ್ಪಿಟ್ಟು ವ್ಯವಸ್ಥೆ ಮಾಡಿದ್ದರು. ಕಾಲೇಜಿನ ಆಡಳಿತ ಮಂಡಳಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಜಿಲ್ಲಾಧಿಕಾರಿ ಗ್ರಾಮಕ್ಕೆ ಪೊಲೀಸ್ ಸಿಬ್ಬಂದಿ ಕಳುಹಿಸಿಕೊಟ್ಟಿದ್ದರು. ವಿದ್ಯಾರ್ಥಿಗಳ ತಂಡ ಪ್ರವಾಸ ಮೊಟಕುಗೊಳಿಸಿದ ಕಾರಣ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಿ ಮಧ್ಯಾಹ್ನ  ಉಡುಪಿಗೆ ಕಳುಹಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News