ಶಿವಮೊಗ್ಗ ನಗರದಲ್ಲಿ ಪ್ರವಾಹ: ದೋಣಿಗಳ ಮೂಲಕ ಜನರ ಸ್ಥಳಾಂತರ

Update: 2019-08-09 15:59 GMT

ಶಿವಮೊಗ್ಗ, ಆ. 9: ಶಿವಮೊಗ್ಗದ ಹಲವು ಬಡಾವಣೆಗಳಲ್ಲಿ ಶುಕ್ರವಾರ ಕೂಡ ಪ್ರವಾಹ ಸ್ಥಿತಿ ಮುಂದುವರಿದಿದೆ. ಗಾಜನೂರಿನ ತುಂಗಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರು ಹೊರ ಬಿಡುತ್ತಿರುವುದರಿಂದ, ಶಿವಮೊಗ್ಗ ನಗರದ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹ ಸ್ಥಿತಿ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.

ಇಮಾಮ್‍ಬಾಡ, ಕುಂಬಾರಗುಂಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಜಲಾವೃತ ಸ್ಥಿತಿ ಮುಂದುವರಿದಿದೆ. ಈ ನಡುವೆ ಶುಕ್ರವಾರ ಶಾಂತಮ್ಮ ಬಡಾವಣೆ, ವಿದ್ಯಾನಗರ ರೈಲ್ವೆ ಗೇಟ್, ನಿಸರ್ಗ ಲೇಔಟ್ ಸುತ್ತಮುತ್ತಲಿನ ಏರಿಯಾಗಳು ಸಂಪೂರ್ಣ ಜಲಾವೃತವಾಗಿದ್ದವು. 

ಅಗ್ನಿಶಾಮಕ ದಳದ ನೆರವಿನೊಂದಿಗೆ ಮಹಾನಗರ ಪಾಲಿಕೆ ಆಡಳಿತವು ನೂರಾರು ಜನರನ್ನು ಎರಡು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ನೆರೆ ಸಂತ್ರಸ್ತರಿಗಾಗಿ ಪಾಲಿಕೆ ಆಡಳಿತವು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್, ಇಮಾಮ್‍ಬಾಡಾದ ಶಾದಿ ಮಹಲ್, ಗುರುಪುರದ ಗುಡ್ಡೇಕಲ್ ದೇವಾಲಯ, ಬಾಪೂಜಿ ನಗರ ಹಾಗೂ ಟಿಪ್ಪುನಗರಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

ನಗರದ ಹೊರವಲಯ ಗೆಜ್ಜೇನಹಳ್ಳಿಯ ಕರಮಕಟ್ಟೆ ಕೆರೆ ಕೋಡಿ ಬಿದ್ದ ಪರಿಣಾಮ, ಬಸವನಗಂಗೂರು-ಸೋಮಿನಕೊಪ್ಪ ಕೆಹೆಚ್‍ಬಿ ಪ್ರೆಸ್ ಕಾಲೋನಿ ಜಲಾವೃತವಾಗಿತ್ತು. ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು, ಜೆಸಿಬಿಯ ಮೂಲಕ ಕೆರೆ ಕೋಡಿ ನೀರನ್ನು ಬೇರೆಡೆ ತಿರುಗಿಸಿದ್ದಾರೆ. ಇದರಿಂದ ಬಡಾವಣೆಯಲ್ಲಿ ನೆರೆ ಸ್ಥಿತಿ ಕಡಿಮೆಯಾಗಿದೆ. 

ನಗರದ ಸೋಮಿನಕೊಪ್ಪ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ಭೈರಿನಕೊಪ್ಪ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಅಪಾರ ಪ್ರಮಾಣದ ಬೆಳೆ ಮುಳುಗಿ ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. 

ಶಿವಮೊಗ್ಗ ನಗರ ಹಾಗೂ ತಾಲೂಕಿನಾದ್ಯಂತ ಕೆರೆಕಟ್ಟೆಗಳು ತುಂಬಿ ಹರಿಯುತ್ತಿರುವುದು, ತುಂಗಾ ನದಿ ಪ್ರವಾಹ ಸೃಷ್ಟಿಸಿರುವುದು ಹಾಗೂ ಮಳೆ ಮುಂದುವರಿದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಕೂಡ ನಗರ ಹಾಗೂ ತಾಲೂಕಿನ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಸಕಲ ಕ್ರಮ: ನಗರದಲ್ಲಿ ತಲೆದೋರಿರುವ ನೆರೆ ಪರಿಸ್ಥಿತಿ ನಿಭಾವಣೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ. ನೆರೆ ನೀರು ನುಗ್ಗುವ ಸಾಧ್ಯತೆ ಇರುವ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲಾಗಿದೆ. ಜಲಾವೃತವಾಗಿದ್ದ ಶಾಂತಮ್ಮ ಲೇಔಟ್‍ನಿಂದ 54 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 

ರಾಮಣ್ಣ ಶ್ರೇಷ್ಟಿ ಪಾರ್ಕ್, ಕುಂಬಾರಗುಂಡಿ ಪ್ರದೇಶದಲ್ಲಿ ಕಚ್ಚಾ ಮನೆ ಹಾಗೂ ತಗ್ಗು ಪ್ರದೇಶದಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳ ಜನರಿಗೆ ವಿತರಿಸಲು ಸಾಧ್ಯವಾಗುವಂತೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ಅಡುಗೆ ಸಾಮಾಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News