ಕುಮದ್ವತಿ ನದಿಗೆ ಬಿದ್ದಿದ್ದ ಓರ್ವನ ಮೃತದೇಹ ಪತ್ತೆ, ಇನ್ನಿಬ್ಬರಿಗಾಗಿ ಶೋಧ

Update: 2019-08-11 13:52 GMT

ಶಿವಮೊಗ್ಗ, ಆ. 11: ಬೊಲೆರೋ ವಾಹನ ಢಿಕ್ಕಿ ಹೊಡೆದ ಪರಿಣಾಮ, ಶನಿವಾರ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಸೇತುವೆ ಮೇಲೆ ನಿಂತುಕೊಂಡು ಪ್ರವಾಹ ವೀಕ್ಷಿಸುತ್ತಿದ್ದ ನಾಲ್ವರು ಕುಮದ್ವತಿ ನದಿಗೆ ಬಿದ್ದಿದ್ದಾರೆ. ಈ ಮೊದಲು ಇಬ್ಬರು ಬಿದ್ದಿದ್ದಾರೆ ಎಂದು ಹೇಳಲಾಗಿತ್ತು.  ಇದರಲ್ಲಿ ನಾಗರಾಜ್ ಎಂಬುವರು ಬದುಕುಳಿದಿದ್ದಾರೆ. ಉಳಿದಂತೆ ಕುಂಸಿಯ ಅಮರನಾಥ (55), ಇವರ ಸಂಬಂಧಿ ಎಂಜನಿಯರಿಂಗ್ ಓದುತ್ತಿದ್ದ ಹರೀಶ್ (20) ಹಾಗೂ ಸನ್ನಿವಾಸ ಗ್ರಾಮದ ರಾಮಪ್ಪ (45) ಎಂಬುವರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. 

ಇದರಲ್ಲಿ ರಾಮಪ್ಪರವರ ಶವವು, ಭಾನುವಾರ ಸಮೀಪದ ಜಮೀನೊಂದರ ತಂತಿ ಬೇಲಿಗೆ ಸಿಲುಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳಿದಂತೆ ಅಮರನಾಥ ಹಾಗೂ ಹರೀಶ್‍ರವರ ಶೋಧ ಕಾರ್ಯಾಚರಣೆ ಮುಂದುವರಿದಿದೆ. 

ಭಾನುವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್), ಅಗ್ನಿಶಾಮಕ ದಳ, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತಕುಮಾರ್, ತಹಶೀಲ್ದಾರ್ ಬಿ.ಎನ್.ಗಿರೀಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. 

ಘಟನೆ ಹಿನ್ನೆಲೆ: ಭಾರೀ ಮಳೆಗೆ ಚೋರಡಿ ಗ್ರಾಮಕ್ಕೆ ಸಮೀಪದ ಸೇತುವೆ ಬಳಿ ಕುಮದ್ವತಿ ನದಿ ಉಕ್ಕಿ ಹರಿಯುತ್ತಿತ್ತು. ಸೇತುವೆ ಮೇಲೆ ನಿಂತುಕೊಂಡು ಸುತ್ತಮುತ್ತಲಿನ ಗ್ರಾಮಗಳ ಜನರು ವೀಕ್ಷಿಸುತ್ತಿದದರು. ಈ ವೇಳೆ ವೇಗವಾಗಿ ಆಗಮಿಸಿದ ಬೊಲೆರೋ ವಾಹನವೊಂದು ಸೇತುವೆ ಪಕ್ಕ ನಿಂತುಕೊಂಡಿದ್ದವರಿಗೆ ಢಿಕ್ಕಿ ಹೊಡೆದಿತ್ತು. 

ಇದರಿಂದ ನಾಲ್ವರು ಉಕ್ಕಿ ಹರಿಯುತ್ತಿದ್ದ ಕುಮದ್ವತಿ ನದಿಗೆ ಬಿದ್ದಿದ್ದರು. ಇದರಲ್ಲಿ ನಾಗರಾಜ್ ಎಂಬುವರನ್ನು ಸಾರ್ವಜನಿಕರೇ ರಕ್ಷಣೆ ಮಾಡಿದ್ದರು. ಈ ಅವಘಡದಿಂದ ಆತಂಕಿತರಾಗಿದ್ದ ಅಲ್ಲಿದ್ದ ಜನರಿಗೆ, ಯಾರ್ಯಾರು ನದಿಗೆ ಬಿದ್ದಿದ್ದಾರೆ ಎಂಬುವುದು ಗೊತ್ತಾಗಿರಲಿಲ್ಲ. ಅಮರನಾಥ ಎಂಬುವರು ಮಾತ್ರ ನದಿಯಲ್ಲಿ ಕೊಚ್ಚಿ ಹೋಗಿದ್ದರು ಎಂದು ಹೇಳಿದ್ದರು. ಆದರೆ ತದನಂತರ ಹರೀಶ್ ಹಾಗೂ ರಾಮಪ್ಪರವರು ಕೂಡ ನದಿಯಲ್ಲಿ ಕೊಚ್ಚಿ ಹೋಗಿದ್ದ ವಿಷಯ ಬೆಳಕಿಗೆ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News