ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಲು ಮಾಜಿ ಸಿಎಂ ಹೆಚ್‍ಡಿಕೆ ಆಗ್ರಹ

Update: 2019-08-11 17:51 GMT

ಮಡಿಕೇರಿ, ಆ.11 : ಮಹಾಮಳೆಯಿಂದ ಕೊಡಗನ್ನು ಒಳಗೊಂಡಂತೆ ರಾಜ್ಯದ ಹಲವೆಡೆಗಳಲ್ಲಿ ಕಾಣಿಸಿಕೊಂಡಿರುವ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ಒದಗಿಸುವಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಾದ ದಕ್ಷಿಣ ಕೊಡಗಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ ಕುಮಾರ ಸ್ವಾಮಿ ಅವರು, ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ನುಡಿದು ಮಾಧ್ಯಮಗಳೊಂದಿಗೆ ಮಾತನಾಡಿದರು.

ನೆರೆ ಹಾವಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ದೊರಕುತ್ತಿಲ್ಲವೆಂದು ಆರೋಪಿಸಿದ ಅವರು, ಕಳೆದ ಸಾಲಿನ ಪ್ರಾಕೃತಿಕ ವಿಕೋಪ ಸಂದರ್ಭ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಬಂದ ಹಣದಲ್ಲಿ 92 ಕೋಟಿ ಹಣವಿದ್ದು, ತಕ್ಷಣ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮುಖ್ಯ ಮಂತ್ರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ನೆರೆ ಹಾವಳಿಯ ಸಂದರ್ಭ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮೇಲ್ಭಾಗದಲ್ಲಿ ಇರುವವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆಂದು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಟೀಕಿಸಿದರು.

ಒಬ್ಬರಿಂದ ಕಾರ್ಯನಿರ್ವಹಣೆ ಅಸಾಧ್ಯ- ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಮತ್ತು ಅಲ್ಲಿನ ಪರಿಹಾರ ಕೇಂದ್ರಗಳಿಗೆ ತಾನು ಭೇಟಿ ನೀಡಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಿಲ್ಲವೆಂದು ತಿಳಿಸಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಾವೊಬ್ಬರೇ ನಿರೀಕ್ಷೆಯಂತೆ ಕಾರ್ಯನಿರ್ವಹಿಸುವುದು ಅಸಾಧ್ಯವೆಂದು ತೀಕ್ಷ್ಣವಾಗಿ ನುಡಿದರು.

ಕಳೆದ ಸಾಲಿನ ಮಹಾಮಳೆಯ ನೆರೆ ಹಾವಳಿಯ ಸಂದರ್ಭ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಮೂಲಕ ಸಂತ್ರಸ್ತರ ಸಂಕಷ್ಟಗಳಿಗೆ ಶೀಘ್ರ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತೆಂದು ಅನಿಸಿಕೆ ವ್ಯಕ್ತಪಡಿಸಿದರು.

ಬಳಿಕ ಕುಮಾರಸ್ವಾಮಿ ಅವರು ವೀರಾಜಪೇಟೆ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಅವರು ಭೇಟಿ ನೀಡಿದರು.
ಈ ಸಂದರ್ಭ ಮಾಜಿ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ಮಾಜಿ ಸಚಿವ ಸಾ.ರ.ಮಹೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಗಣೇಶ್, ಉಪಾಧ್ಯಕ್ಷ ಮನಿಯಪಂಡ ಬೆಳ್ಯಪ್ಪ, ಪಕ್ಷದ ಜಿಲ್ಲಾ ವಕ್ತಾರ ಎಂ.ಟಿ.ಕಾರ್ಯಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಪರಮಾಲೆ ಗಣೇಶ್, ಪೊನ್ನಂಪೇಟೆಯ ಕುಸುಮಾವತಿ, ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ಹೆಚ್.ಮತೀನ್, ನಗರ ಅಧ್ಯಕ್ಷ ಪಿ.ಎ.ಮಂಜುನಾಥ್, ಪಟ್ಟಣ ಪಂಚಾಯತ್ ಸದಸ್ಯರಾದ ಮಹ್ಮದ್ ರಾಫಿ, ಅಗಸ್ಟಿನ್ ಬೆನ್ನಿ ಮುಂತಾದವವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News