ಗೋ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Update: 2019-08-16 17:10 GMT

ಬೆಂಗಳೂರು, ಆ.16: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಸರಕಾರ ತೆರೆದಿರುವ ಗೋಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಯಾವ ರೀತಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂಬುದರ ಕುರಿತು ಕಾನೂನು ಪ್ರಾಧಿಕಾರದ ಅಧಿಕಾರಿಗಳಿಗೆ ಪರಿಶೀಲನೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬರಪೀಡಿತ ತಾಲೂಕುಗಳೆಂದು ಘೋಷಿಸಿದ ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ 6 ಕೆಜಿ ಒಣ ಮೇವು, 18 ಕೆಜಿ ಹಸಿರು ಮೇವು ಹಾಗೂ 1 ಕೆಜಿ ಪಶು ಆಹಾರ ಪೂರೈಸಬೇಕೆಂದು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ, ಅಲ್ಲಿ ಜಾನುವಾರುಗಳಿಗೆ ಮೇವು, ನೀರು, ವೈದ್ಯಕೀಯ ಸೌಲಭ್ಯ ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೇ ಎಂಬುದರ ಕುರಿತು ಕಾನೂನು ಪ್ರಾಧಿಕಾರದ ಪ್ರತಿನಿಧಿಗಳು ಪರಿಶೀಲನೆ ನಡೆಸಬೇಕೆಂದು ನ್ಯಾಯಪೀಠವು ನಿರ್ದೇಶಿಸಿತು.

ಸರಕಾರದ ಪರ ವಾದಿಸಿದ ವಕೀಲರು, ರಾಜ್ಯದ ಬರಪೀಡಿತ ತಾಲೂಕುಗಳ ಪೈಕಿ 109 ತಾಲೂಕುಗಳಲ್ಲಿ ಗೋ ಶಾಲೆಗಳನ್ನು ತೆರೆಯಲಾಗಿದೆ. ಆದರೆ, ಅಲ್ಲಿಗೆ ಎಷ್ಟೋ ಗೋಶಾಲೆಗಳಿಗೆ ಜಾನುವಾರುಗಳೆ ಬರುತ್ತಿಲ್ಲ. ಅಲ್ಲದೆ, ಗೋ ಶಾಲೆಗಳನ್ನು ತೆರೆದಿರುವ ಬಗ್ಗೆ ಗ್ರಾಮಗಳಲ್ಲಿ ಸಾರ್ವಜನಿಕ ನೋಟಿಸ್ ಪ್ರಕಟಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವುದರ ಜೊತೆಗೆ ಗೋ ಶಾಲೆಗಳಲ್ಲಿ ಹೆಚ್ಚಿನ ಮೇವನ್ನು ಸಂಗ್ರಹಿಸಿಡಬೇಕೆಂದು ಸರಕಾರಕ್ಕೆ ಸೂಚಿಸಿತು. ಅರ್ಜಿ ವಿಚಾರಣೆಯನ್ನು ಆ.26ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News