ಜಾತಿವಾದ ನಾಶವಾಗಬೇಕಾದರೆ ಗಾಂಧೀಜಿಯ ಸಿದ್ಧಾಂತಗಳನ್ನು ಅರಿಯಬೇಕು: ರವೀಂದ್ರ ಖೈರೆ

Update: 2019-08-18 17:37 GMT

ಬೆಳಗಾವಿ, ಆ.18: ಸತ್ಯ ಮಾತನಾಡಿದ ಮತ್ತು ಸತ್ಯದ ಆಗ್ರಹ ಮಾಡಿದ ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಡಾ.ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನೂ ಅದೇ ರೀತಿ ಕೊಲೆ ಮಾಡಲಾಗಿದೆ ಎಂದು ಕೊಲ್ಹಾಪುರದ ಆ್ಯಟಿಟ್ಯೂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ರವೀಂದ್ರ ಖೈರೆ ಹೇಳಿದ್ದಾರೆ. 

ರವಿವಾರ ದಮಶಿ ಮಂಡಳದ ಭಾವುರಾವ ಕಾಕತಕರ ಕಾಲೇಜು ಆಯೋಜಿಸಿದ್ದ ಗಾಂಧೀಜಿ ಮತ್ತು ಅವರ ಕೊಡುಗೆಗಳು ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಾಂಧೀಜಿಯವರು ಸತ್ಯ, ಅಹಿಂಸೆ, ಸತ್ಯಾಗ್ರಹ ಎಂಬ ಶಸ್ತ್ರಗಳನ್ನು ಇಡೀ ಪ್ರಪಂಚಕ್ಕೆ ನೀಡಿದರು. ಸ್ವಾತಂತ್ರ ದೊರೆತಾಗ ಇಡೀ ದೇಶ ಸಂತೋಷದಲ್ಲಿದ್ದಾಗ ಗಾಂಧೀಜಿಯವರು ದೇಶ ವಿಭಜನೆಯಲ್ಲಿ ನೊಂದವರ ಕಣ್ಣೀರನ್ನು ಒರೆಸುತ್ತಿದ್ದರು. ಆದರೆ, ಕೆಲವರು ವಿಭಜನೆಯ ಸತ್ಯವನ್ನು ಮರೆಮಾಚಿ ಬೇರೆ ಸುಳ್ಳನ್ನು ಪಸರಿಸುತ್ತಿದ್ದಾರೆ. ಈ ಬಗ್ಗೆ ಯುವಕರು ಜಾಗೃತರಾಗಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದಮಶಿ ಮಂಡಳದ ಉಪಾಧ್ಯಕ್ಷ ರಾಜಾಭಾವು ಪಾಟೀಲ್ ಮಾತನಾಡಿ, ಜಾತಿವಾದ ನಾಶವಾಗಬೇಕಾಗದರೆ ಗಾಂಧೀಜಿ ಅವರ ಮಹತ್ವ ಮತ್ತು ನೀಡಿದ ಕೊಡುಗೆ, ಸರಳ ಬದುಕಿನ ಸಿದ್ಧಾಂತಗಳನ್ನು ಯುವಜನರು ಅರಿಯಬೇಕೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News