ನೆರೆ ಹಾನಿ ಸಂತ್ರಸ್ತರ ಪುನರ್ವಸತಿಗೆ ಸರಕಾರದ ಮೇಲೆ ಒತ್ತಡ: ಎಚ್.ಡಿ.ಕುಮಾರಸ್ವಾಮಿ

Update: 2019-08-19 18:15 GMT

ಕಳಸ, ಆ.19: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೋಬಳಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಮಧ್ಯಾಹ್ನದ ವೇಳೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

ಕಳಸ ತಾಲೂಕಿನ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಭೂದಿಗುಂಡಿ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಸಂಕಷ್ಟಕ್ಕೊಳಕ್ಕಾದ ಕುಟುಂಬಗಳು ತಮ್ಮ ಸಮಸ್ಯೆಗಳ ಸರಮಾಲೆಯನ್ನೆ ಬಿಚ್ಚಿಟ್ಟರು. ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೆವು. ಆದರೆ ಕ್ಷಣ ಮಾತ್ರದಲ್ಲಿ ನಮ್ಮ ಬದುಕೇ ಸರ್ವನಾಶವಾಗಿದೆ. ಎಲ್ಲಾ ಮನೆ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಇರಲು ಮನೆಯಿಲ್ಲ. ತಿನ್ನಲು ಊಟವಿಲ್ಲ, ಕುಡಿಯಲು ನೀರಿಲ್ಲ, ಕೂಲಿ ಮಾಡೋಕೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಈ ಪ್ರದೇಶ ಅಂದರೆ ಭೂದಿಗುಂಡಿ, ಚನ್ನಡ್ಲು, ಮಲ್ಲೇಶನಗುಡ್ಡ ವಾಸ ಮಾಡಲು ಯೋಗ್ಯವಾದ ಸ್ಥಳವೇ ಅಲ್ಲ. ನಮಗೆ ವಾಸ ಮಾಡಲು ಬೇರೆ ಭೂಮಿಯನ್ನು ನೀಡುವ ವ್ಯವಸ್ಥೆಯಾಗಬೇಕು. ಭೂಮಿ ನೀಡಿ ಮನೆ ಕಟ್ಟಿಕೊಟ್ಟರೆ ನಾವು ಹೇಗಾದರೂ ಜೀವನ ಸಾಗಿಸುತ್ತೇವೆ ಎಂದು ನಿರಾಶ್ರಿತರು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಹಾನಿಗೊಳಗಾದ ಪ್ರದೇಶ ಜನರಿಗೆ ವಾಸಯೋಗ್ಯವಾಗಿಲ್ಲ ಎಂಬುದನ್ನು ಮನಗಂಡಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ಈ ವಿಚಾರವನ್ನು ಸರಕಾರದ ಬಳಿ ಚರ್ಚಿಸುತ್ತೇನೆ. ಸೂಕ್ತ ಪರಿಹಾರ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.

ಮನೆ ಕುಸಿತದಿಂದ ಮೃತರಾದ ಸಂತೋಷ್ ಅವರ ತಾಯಿಯನ್ನು ಸಂತೈಸಿ ಸಂತ್ರಸ್ತರಿಗೆ ದೈರ್ಯ ತುಂಬಿದ ಮಾಜಿ ಮುಖ್ಯಮಂತ್ರಿ, ಮೃತರ ಕುಟುಂಬಸ್ಥರಿಗೆ ಸರಕಾರದಿಂದ ಏನು ಸವಲತ್ತುಗಳು ಸಿಗಬೇಕೋ ಅದು ಸಿಗುವಂತೆ ಸರಕಾರ ಗಮನಕ್ಕೆ ತರುತ್ತೇನೆ. ನೆರೆಪೀಡಿತ ಎಲ್ಲಾ ಪ್ರದೇಶಗಳಿಗೂ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಆಗಿರುವ ಅನಾಹುತಗಳ ಬಗ್ಗೆ ಸಂಪೂರ್ಣ ವರದಿಯನ್ನು ನಮ್ಮ ಕಡೆಯಿಂದ ತಯಾರಿಸಿ ಸೂಕ್ತವಾದ ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರಗಳನ್ನು ನೀಡುವ ಬಗ್ಗೆ ಸರಕಾರದ ಮುಂದಿಡುತ್ತೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಶ್ರೀ ಕ್ಷೇತ್ರ ಹೊರನಾಡಿಗೆ ಭೇಟಿ ನೀಡಿ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಧರ್ಮಕರ್ತ ಭೀಮೇಶ್ವರ ಜೋಷಿ ಅವರು ಕಳಸ ಹೋಬಳಿಯಾದ್ಯಂತ ಆದ ಪ್ರವಾಹ ಮತ್ತು ಅದರಿಂದ ಆಗಿರುವ ಹಾನಿಯ ಬಗ್ಗೆ ಮಾಜಿ ಮುಖ್ಯಮಂತ್ರಿಗಳ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಾ.ರಾ.ಮಹೇಶ್, ಭೋಜೇಗೌಡ, ಧರ್ಮೇಗೌಡ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್, ತಾಪಂ ಸದಸ್ಯ ಮುಹಮ್ಮದ್ ರಫೀಕ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಮುಖಂಡರಾದ ಮಂಜಪ್ಪಯ್ಯ, ರವಿರೈ, ಆಶಾಲತ ಜೈನ್, ಪ್ರಸಾದ್ ಬಲಿಗೆ ಮತ್ತಿತರರು ಉಪಸ್ಥಿತರಿದ್ದರು.

ಮಲೆನಾಡ ಚಿಕನ್ ಸುಕ್ಕ ಸವಿದ ಕುಮಾರಸ್ವಾಮಿ: ಕಳಸ ಹೋಬಳಿಯಾದ್ಯಂತ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದ ಕುಮಾರಸ್ವಾಮಿ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಜೆಡಿಎಸ್ ಮುಖಂಡ ಬಿ.ವಿ.ರವಿ ರೈ ಮನೆಗೆ ತೆರಳಿ, ಮಲೆನಾಡು ಶೈಲಿಯ ಊಟವನ್ನು ಸವಿದರು. ಚಿಕನ್ ಸುಕ್ಕ, ಚಿಕನ್ ಗೀ ರೋಸ್ಟ್, ಗೀ ರೈಸ್, ಮೊಸರನ್ನ, ಅನ್ನ ಸಾಂಬಾರ್ ಸವಿದರು.​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News