ಪಿಓಪಿ, ಪ್ಲಾಸ್ಟಿಕ್ ಗಣೇಶ ಮೂರ್ತಿ ತ್ಯಜಿಸಿ, ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಿ: ದಾವಣಗೆರೆ ಜಿಲ್ಲಾಧಿಕಾರಿ

Update: 2019-08-27 18:20 GMT

ದಾವಣಗೆರೆ, ಆ.27: ಸರ್ಕಾರದ ಆದೇಶದಂತೆ ಗರಿಷ್ಠ ಐದು ಅಡಿಗಳಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸುವಂತಿಲ್ಲ. ಅದರಂತೆ ನಗರದಲ್ಲಿಯೂ ಸಹ ಐದು ಅಡಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಲು ಯಾವುದೇ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಏರ್ಪಸಿದ್ದ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಿಓಪಿ ಗಣಪತಿ ಅಥವಾ ಪ್ಲಾಸ್ಟಿಕ್ ಗಣೇಶ ಮೂರ್ತಿಗಳನ್ನು ಹಬ್ಬಗಳಲ್ಲಿ ಬಳಸುವಂತಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು ಎಂದರು.

ಜಿಲ್ಲೆಯಲ್ಲಿ ಹಾಗೂ ಇತರೆ ಜಿಲ್ಲೆ, ರಾಜ್ಯಗಳಿಂದ ತಯಾರಾಗಿ ಬರುವ ಪಿಓಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೇನಾದರೂ ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರಿಗೆ ಪಿಓಪಿ ಗಣಪಗಳ ತಯಾರಿ ಮತ್ತು ಮಾರಾಟ ಕಂಡುಬಂದಲ್ಲಿ ಪಾಲಿಕೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಓಪಿ ಯಿಂದ ತಯಾರಾದ ಗಣಪತಿಗಳನ್ನು ಬಳಸುವಂತಿಲ್ಲ. ಹಾಗೆ ತಯಾರಾದ ಗಣಪತಿಗಳನ್ನು ವಶಪಡಿಸಿಕೊಂಡು ಧಾರ್ಮಿಕ ವಿಧಿ ವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಲಾಗುವುದು. ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳ ಪರವಾನಿಗೆ ರದ್ದು ಮಾಡಲಾಗುವುದು. ಪರವಾನಿಗೆ ಇಲ್ಲದ ತಯಾರಕ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಹಾಗೂ ವಿಸರ್ಜನೆ ಸಂದರ್ಭದಲ್ಲಿ ಹಸಿಕಸ (ಹೂ-ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ) ಸಮೇತ ಮೂರ್ತಿಗಳನ್ನು ವಿಸರ್ಜನೆ ಮಾಡದೇ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಮೂರ್ತಿಗಳು, ಬಣ್ಣ ಲೇಪಿತ ವಿಗ್ರಹಗಳು ಪರಿಸರ ಹಾಗೂ ಜಲ ಮೂಲಗಳಿಗೆ ಹಾನಿಕಾರಕವಾಗಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಿಬೇಕು. ವಾರ್ಡ್ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿಕೊಂಡು ಗಣೇಶ ಮೂರ್ತಿಗಳನ್ನು ಸೂಕ್ತ ವಿಲೇವಾರಿಗೆ ಕ್ರಮ ವಹಿಸಬೇಕು. ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲ ಮೂಲಗಳನ್ನು ನಿಗದಿಪಡಿಸಿ ಈ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಪಾಲಿಕೆಯಿಂದ ಬೇರೆ ಬೇರೆ ತಂಡಗಳನ್ನು ರಚಿಸಿ ಪಿಓಪಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟವಾಗದಂತೆ ಕ್ರಮವಹಿಸಲಾಗಿದೆ. ಮೂರ್ತಿಗಳ ವಿಸರ್ಜನೆ ವೇಳೆ ಹಸಿಕಸವನ್ನು ಹಾಕಲು ಪ್ರತ್ಯೇಕ ಟ್ರಾಕ್ಟರ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಜಿಲ್ಲೆ ಹಾಗೂ ತಾಲೂಕು ಮಟ್ಟಗಳಲ್ಲಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಈಗಾಗಲೇ ಸಮಿತಿಗಳನ್ನು ರಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಬಾತಿ ಹಾಗೂ ಶಿರಮಗೊಂಡನಹಳ್ಳಿ ಹತ್ತಿರ ಮೂರ್ತಿಗಳ ವಿಸರ್ಜನೆಗೆ ಸ್ಥಳಗಳನ್ನು ನಿಗದಿ ಮಾಡಲಾಗಿದೆ ಹಾಗೂ 30 ಮೊಬೈಲ್ ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದೆ. ಜಗಳೂರು, ಮಲೆಬೇನ್ನೂರು, ಚನ್ನಗಿರಿ, ಹರಿಹರ ಹಾಗೂ ಹೊನ್ನಾಳಿಯಲ್ಲಿ ಮೂರ್ತಿಗಳ ವಿಸರ್ಜನೆಗೆ ಸ್ಥಳ ನಿಗದಿಪಡಿಸಲಾಗಿದೆ. ಹಬ್ಬದ ಮುಂಜಾಗ್ರತ ಕ್ರಮಗಳಾಗಿ ಮಣ್ಣಿನ ಗಣೇಶ ಮೂರ್ತಿ ಪೂಜಿಸಲು, ವಿಷಕಾರಿ ರಾಸಾಯನಿಕ, ಲೋಹ, ಪ್ಲಾಸ್ಟಿಕ್ ಲೇಪಿತ ಗಣೇಶ ಮೂರ್ತಿಗಳನ್ನು ಬಳಸದಂತೆ ಸೂಚಿಸಲಾಗಿದೆ.

ಸಾರ್ವಜನಿಕರ ಬಾವಿ, ಕೆರೆ, ಹೊಳೆ ಜಲಮೂಲಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸದೇ ಬಕೆಟ್, ಸಂಚಾರಿ ವಿಸರ್ಜನಾ ವಾಹನ ಅಥವಾ ಸೂಚಿತ ನೀರಿನ ಕಟ್ಟೆಗಳಲ್ಲಿ ಮಾತ್ರ ವಿಸರ್ಜಿಸಬೇಕು. ಹಾಗೂ ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಮಾತ್ರ ಬಳಸುವಂತೆ  ಕ್ರಮಗಳನ್ನು ವಹಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕೋಟ್ರೆಶ್, ತಹಶೀಲ್ದಾರ್ ಸಂತೋಷ್‍ಕುಮಾರ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News