ಹನೂರು ವಿಷ ಪ್ರಸಾದ ದುರಂತ: ಭರವಸೆಯಂತೆ ನೆರವಿಗೆ ಬಾರದ ಸರ್ಕಾರ- ಸಂತ್ರಸ್ತರ ಆರೋಪ

Update: 2019-08-28 17:57 GMT

ಚಾಮರಾಜನಗರ, ಆ.28: ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ವಿಷಪ್ರಸಾದ ದುರಂತದ ಹಿನ್ನೆಲೆಯಲ್ಲಿ ಈ ಹಿಂದೆ ಮೈತ್ರಿ ಸರ್ಕಾರ ನೀಡಿದ್ದ ಹಲವು ಭರವಸೆಗಳನ್ನು ಇನ್ನೂ ಈಡೇರಿಲ್ಲ. ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಸರ್ಕಾರ ತಿಳಿಸಿದ್ದರೂ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಂತ್ರಸ್ತರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

2018ರ ಡಿ.14 ರಂದು ನಡೆದ ವಿಷ ಪ್ರಸಾದ ಪ್ರಕರಣದಲ್ಲಿ 17 ಮಂದಿ ಮೃತಪಟ್ಟಿದ್ದು, 125 ಮಂದಿ ಅಸ್ವಸ್ಥರು ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದರೂ ಹಲವು ಆರೋಗ್ಯ ಸಮಸ್ಯೆಯನ್ನು ಇನ್ನೂ ಅನುಭವಿಸುತ್ತಲೇ ಇದ್ದಾರೆ. ಘಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಅದ್ಯಾವುದೂ ಈಡೇರಿಲ್ಲ. ತಕ್ಷಣವೇ ಸರಕಾರ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬಿದರಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತ ಪ್ರತಿ ಕುಟುಂಬಕ್ಕೆ 3 ಎಕರೆ ಜಮೀನು, ಅದಕ್ಕೆ ಕೊಳವೆ ಬಾವಿ, ವಾಸಕ್ಕೆ ಮನೆ, ಸರಕಾರಿ ಉದ್ಯೋಗ, ಉಚಿತ ವೈದ್ಯ ಸೇವೆ ಸೇರಿದಂತೆ ಹತ್ತಾರು ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ. ವಿಷ ಪ್ರಸಾದ ಸೇವಿಸಿದ ಮಕ್ಕಳು ಈಗ ಶಾಲೆಗೆ ಹೋಗುವಾಗ ಮಂಪರು ನಿದ್ರೆಗೆ ಜಾರುವುದು, ಅಸ್ವಸ್ಥರಾಗುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ರಕ್ತ ಪರೀಕ್ಷೆ, ಔಷಧ, ಚುಚ್ಚುಮದ್ದು ಇನ್ನಿತರೆ ಸೇವೆಗೆ ಸಾವಿರಾರು ರೂ.ಗಳನ್ನು ಪಡೆಯುತ್ತಿದ್ದಾರೆ ಎಂದು ಅಲವತ್ತುಕೊಂಡರು.

ಸರಕಾರ ನೀಡಿದ್ದ ಪರಿಹಾರ ಆಸ್ಪತ್ರೆಗಳಿಗೆ ನೀಡುವಂತೆ ಆಗಿದೆ. ಸರಕಾರಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ. ಸಂತ್ರಸ್ತರು ಬಿಸಿಲಿಗೆ ಮುಖ ಒಡ್ಡಲು ಕಷ್ಟ ಪಡುತ್ತಿದ್ದಾರೆ. ಕಣ್ಣು ಉರಿ, ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತಿದೆ. ಸಂತ್ರಸ್ತರನ್ನೇ ನೋಡಿಕೊಳ್ಳಲು ಮನೆಯಲ್ಲಿ ಇಬ್ಬರು ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಂತ್ರಸ್ತೆ ಎಂ.ಜಿ.ದೊಡ್ಡಿಯ ಕೃಷ್ಣವೇಣಿ ಅವರು.

ವಿಶೇಷ ಕೋರ್ಟ್ ಸ್ಥಾಪಿಸಲಿ: ಪೆದ್ದನಪಾಳ್ಯ ಮಣಿ ಮಾತನಾಡಿ, ಪ್ರಕರಣ ನ್ಯಾಯಾಲಯದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೂ ಸಂತ್ರಸ್ತರ ಗ್ರಾಮಗಳಿಗೂ ಸುಮಾರು 200 ಕಿ.ಮೀ.ದೂರವಿರುವುದರಿಂದ ಪ್ರಕರಣದಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ತೆರಳಲು ಕಷ್ಟವಾಗುತ್ತಿದೆ. ಹನೂರು ಕೇಂದ್ರ ಸ್ಥಾನದಲ್ಲೇ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಸಂತ್ರಸ್ತ ಆರು ಮಂದಿಗೆ ಸರಕಾರದಿಂದ ಇನ್ನೂ ಸ್ವಲ್ಪ ಪರಿಹಾರ ದೊರಕಬೇಕಾಗಿದೆ. ಸಂತ್ರಸ್ತರಿಗೆ ಕೊನೆಯವರೆಗೂ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಸೇರಿದಂತೆ ಪ್ರತಿ ತಿಂಗಳು 10 ಸಾವಿರ ಪಿಂಚಣಿಯನ್ನು ನೀಡಬೇಕು ಎಂದು ಒತ್ತಾಯಿಸಿದರು. 

ಸುಳವಾಡಿ, ಎಂ.ಜಿ.ದೊಡ್ಡಿ, ಬಿದರಳ್ಳಿ ಮತ್ತಿತರ ಗ್ರಾಮಗಳ ನೂರಕ್ಕೂ ಹೆಚ್ಚು ಸಂತ್ರಸ್ತರು ಮಾಧ್ಯಮದವರ ಮುಂದೆ ತಮ್ಮ ನೋವನ್ನು ಹೇಳಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News