ನಿಮ್ಮ ಪರವಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ: ನೆರೆ ಸಂತ್ರಸ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಯ

Update: 2019-09-01 15:42 GMT

ಮೈಸೂರು,ಸೆ.1: ನೆರೆ ಸಂತ್ರಸ್ತರಿಗೆ ಸರಕಾರ ಸರಿಯಾಗಿ ಸ್ಪಂದಿಸದಿದ್ದರೆ ವಿರೋಧ ಪಕ್ಷದಲ್ಲಿರುವ ನಾವು ಬೀದಿಗಿಳಿದು ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ಸಂತ್ರಸ್ತರಿಗೆ ಅಭಯ ನೀಡಿದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ, ವರುಣಾ, ನಂಜನಗೂಡು ಮತ್ತು ಎಚ್.ಡಿ.ಕೋಟೆಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಿ ನಂಜನಗೂಡಿನ ಶ್ರೀಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿರುವ ಶ್ರೀಶ್ರೀಕಂಠೇಶ್ವರ ಕಲಾಮಂದಿರದಲ್ಲಿ ನೆರೆಸಂತ್ರರಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ನೆರೆ ಸಂತ್ರಸ್ತರಿಗೆ ಸರಕಾರ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು, ತಕ್ಷಣಕ್ಕೆ ನೀಡುತ್ತಿರುವ ಹತ್ತು ಸಾವಿರ ರೂ. ಯಾವುದಕ್ಕೂ ಸಾಕಾಗುತ್ತಿಲ್ಲ, ಹಾಗಾಗಿ ಒಂದು ಲಕ್ಷ ರೂ. ಗಳನ್ನು ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ನೆರೆ ಬಂದು ಅಲ್ಲಿನ ಜನರು ಮನೆ, ಮಠ, ಪಾತ್ರೆ, ಸಾಮುನುಗಳು, ಮತ್ತು ದಾಖಲೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹತ್ತು ಸಾವಿರ ಸಾಲದು ಹಾಗಾಗಿ ಒಂದು ಲಕ್ಷ ರೂ.ಗಳನ್ನು ನೀಡಬೇಕು, ಹಾಗೆ ಅವರಿಗೆ 25% ಮನೆ ಹಾಳಾಗಿದ್ದರೆ 25 ಸಾವಿರ, 75% ಹಾಳಾಗಿದ್ದರೆ 50 ಸಾವಿರ, ಸಂಪೂರ್ಣ ಮನೆ ಕುಸಿದಿದ್ದರೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಈ ಪರಿಹಾರವೂ ಸಾಲದು, ಹಾಗಾಗಿ 50 ಸಾವಿರ, ಒಂದು ಲಕ್ಷ ಮತ್ತು ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೇಳಿದರು.

ನೆರೆ ಪರಿಹಾರ ಕುರಿತು ಚರ್ಚಿಸಲು ವಿಧಾನ ಮಂಡಲ ಅಧಿವೇಶನ ಕರೆಯುವಂತೆ ಹೇಳಿದ್ದೇವೆ. ಅಧಿವೇಶನದಲ್ಲಿ ನೆರೆ ಪರಿಹಾರದ ಬಗ್ಗೆ ಚರ್ಚಿಸಿ ಸರಕಾರದ ಕಿವಿಹಿಂಡುತ್ತೇವೆ. ಅದಕ್ಕೂ ಬಗ್ಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಪ್ರವಾಹ ಬಂದಾಗ ಪದೇ ಪದೇ ಮನೆಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಅಗತ್ಯವಿದೆ. ಅವರಿಗೆ ಬೇರೆ ಎಲ್ಲಾದರೂ ಸ್ಥಳ ನೋಡಿ ಅಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡಬೇಕು, ಜಾಗ ಇಲ್ಲದಿದ್ದರೆ ಖರೀದಿಸಿ ಅವರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಹೇಳಿದರು.

ಸದ್ಯ ಮನೆ ಇಲ್ಲದೆ ಇರುವವರಿಗೆ 5 ಸಾವಿರ ಬಾಡಿಗೆ ನಿಡುವುದಾಗಿ ಸರಕಾರ ಹೇಳಿದೆ. ಅದು ಸಾಕಾಗುವುದಿಲ್ಲ, ಹಾಗಾಗಿ ಹತ್ತು ಸಾವಿರ ರೂ.ಗಳನ್ನು ಬಾಡಿಗೆಗಾಗಿ ನೀಡಬೇಕು ಎಂದು ಹೇಳಿದರು.

ಇದೇ ವೇಲೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಂಸದ ಆರ್.ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ,ನಗರಸಭಾ ಸದಸ್ಯರಾದ ಎನ್.ಎಸ್.ಯೋಗೀಶ್, ಎಸ್.ಪಿ.ಮಹೇಶ್, ಗಂಗಾಧರ್, ಯೋಗೇಶ, ಕಾಂಗ್ರೆಸ್ ಮುಖಂಡರಾದ ಬುಲೆಟ್ ಮಹದೇವಪ್ಪ, ದೇಬೂರು ಸಿದ್ದಲಿಂಗಪ್ಪ, ಮಂಜುನಾಥ್, ಇಂಧನ್ ಬಾಬು, ಶ್ರೀನಿವಾಸಯ್ಯ, ಸಿಂಗಾರಿಪುರ ನಾಗರಾಜು, ಹುಂಡಿ ನಾಗರಾಜು, ಗುರುಮಲ್ಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News