ತ್ಯಾಜ್ಯ ವಿಲೇವಾರಿಗೆ ಬಾರ್ ಕೋಡಿಂಗ್ ವ್ಯವಸ್ಥೆ: ನ್ಯಾ.ಸುಭಾಷ್ ಆಡಿ

Update: 2019-09-03 15:54 GMT

ಬೆಳಗಾವಿ, ಸೆ.3: ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಬಾರ್ ಕೋಡಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಹದಿನೈದು ದಿನಗಳ ಅವಕಾಶ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಆಡಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಒಪ್ಪಿಗೆಯ ಮೇರೆಗೆ ಕ್ಲಿನಿಕ್‌ಗಳಿಗೆ ಅನುಮತಿ ನೀಡಬೇಕು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಸ ವಿಲೇವಾರಿ ಖರ್ಚು ಕಡಿಮೆ ಮಾಡಲು ವಾರ್ಡ್‌ವಾರು ಮೈಕ್ರೋ ಯೋಜನೆ ರೂಪಿಸಬೇಕು. ಸ್ಥಳ ಗುರುತಿಸಿ, ಸ್ಥಳೀಯವಾಗಿಯೇ ಹಸಿ ಕಸವನ್ನು ಅಲ್ಲೇ ಕಾಂಪೋಸ್ಟ್ ಮಾಡಬೇಕು. ಅದೇ ರೀತಿ ವಿಶ್ವವಿದ್ಯಾಲಯ, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ದೊಡ್ಡ ಪ್ರಮಾಣದ ಕಸವನ್ನು ಆಯಾ ಸಂಸ್ಥೆಗಳ ಆವರಣದಲ್ಲಿಯೇ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಅಲ್ಲಿಯೇ ಘಟಕಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ 33 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿ ಕಸ ಸಂಗ್ರಹಿಸಬೇಕು. ಒಣ ಕಸವನ್ನು ವಾರದಲ್ಲಿ ಒಮ್ಮೆ ಸಂಗ್ರಹಿಸಬೇಕು. ವಾರ್ಡ್‌ವಾರು ಮೈಕ್ರೋ ಯೋಜನೆ ರೂಪಿಸಿ ಹಸಿ ಕಸವನ್ನು ಆಯಾ ವಾರ್ಡ್‌ಗಳಲ್ಲಿಯೇ ಕಾಂಪೋಸ್ಟ್ ಮಾಡಲು ಕ್ರಮ ತೆಗೆದುಕೊಂಡರೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗುತ್ತದೆ. ಈ ಬಗ್ಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಸುಭಾಷ್ ಆಡಿ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ-ಕಡ್ಡಾಯ ಜಾರಿ: ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯತಿಯಿಂದ ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಬೈಲಾ ಪ್ರಕಾರ ದಂಡ ವಿಧಿಸಬೇಕು ಎಂದು ಅವರು ಸೂಚನೆ ನೀಡಿದರು.

ಮುಂದಿನ ಹದಿನೈದು ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆನ್‌ಲೈನ್ ದಂಡ ಸಂಗ್ರಹ ವ್ಯವಸ್ಥೆ ಲಭ್ಯವಿದ್ದು, ಅದೇ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಸುಭಾಷ್ ಆಡಿ ತಿಳಿಸಿದರು.

2016 ಘನತ್ಯಾಜ್ಯ ವಿಲೇವಾರಿ ನಿಯಮಾವಳಿ ಅನ್ವಯ ಪ್ರತಿ ಸ್ಥಳೀಯ ಸಂಸ್ಥೆಯು ಎರಡು ವರ್ಷಗಳಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ವ್ಯವಸ್ಥೆಯನ್ನು ಮಾಡಬೇಕಿತ್ತು. ಇದಾದ ಬಳಿಕ ಆರು ತಿಂಗಳು ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಸಮಯಾವಕಾಶ ಮೀರಿದೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಭಾರೀ ಪ್ರಮಾಣದ ಹಾನಿ ಉಂಟಾಗಿರುವುದರಿಂದ ಸ್ವಲ್ಪಕಾಲಾವಕಾಶ ನೀಡಿ ಅಂತಿಮ ವರದಿ ಸಲ್ಲಿಸಲಾಗುವುದು. ಇ-ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಒಂದು ಘಟಕ ಸ್ಥಾಪಿಸಿ ನಿಯಮಾವಳಿ ಪ್ರಕಾರ ವಿಲೇವಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಸುಭಾಷ್ ಆಡಿ ತಿಳಿಸಿದರು.

ಇ-ತ್ಯಾಜ್ಯ ವಿಲೇವಾರಿ ಆಯಾ ಕಂಪೆನಿಗಳ ಹೊಣೆಗಾರಿಕೆಯಾಗಿದೆ. ಒಂದು ವೇಳೆ ಮಹಾನಗರ ಪಾಲಿಕೆ ವಿಲೇವಾರಿ ಮಾಡುವುದಾದರೆ ಸಂಬಂಧಪಟ್ಟ ಕಂಪನಿಗಳು ಹಣ ಪಾವತಿಸಬೇಕಾಗುತ್ತದೆ. ಬೆಳಗಾವಿ ಸ್ಮಾರ್ಟ್ ಸಿಟಿ ಆಗಬೇಕಾದರೆ ಎಲ್ಲ ಬಗೆಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕಿದೆ. ಹಸಿ, ಒಣ ಕಸ ಹಾಗೂ ಅಪಾಯಕಾರಿ ಕಸ ಸಮಗ್ರ ನಿರ್ವಹಣೆಗೆ ಒಂದು ಕಮಾಂಡ್ ಸೆಂಟರ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ಅವರು ಹೇಳಿದರು. ಪಿಓಪಿ ಗಣೇಶ ನಿಷೇಧದ ಬಗ್ಗೆ ಜನರು ಜಾಗೃತರಾಗಿದ್ದು, ಬೆಂಗಳೂರಿನಲ್ಲಿ ದೊಡ್ಡ ಯಶಸ್ಸು ದೊರೆತಿದೆ. ಇದೇ ರೀತಿ ಇತರ ಕಡೆಗಳಲ್ಲೂ ಜಾಗತಿ ಮೂಡಿಸಲಾಗುತ್ತಿದೆ. ಕಸ ವಿಲೇವಾರಿ, ಪಿಓಪಿ ಗಣೇಶ ನಿಷೇಧ ಸೇರಿದಂತೆ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಸುಭಾಷ್ ಆಡಿ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News