ಭಾವಚಿತ್ರಗಳ ಮುದ್ರಣಕ್ಕೆ ಸಿದ್ಧವಾದ ಮೈಸೂರು ಸ್ಯಾಂಡಲ್ ಸೋಪ್

Update: 2019-09-07 16:28 GMT

ಬೆಂಗಳೂರು, ಸೆ.7: ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ(ಕೆಎಸ್‌ಡಿಎಲ್) ತನ್ನ ಉತ್ಪನ್ನಗಳ ಮೇಲೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರವನ್ನು ಮುದ್ರಿಸಲು ನಿರ್ಧರಿಸಲಾಗಿದೆ. ಶತಮಾನದ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಿಳಿಸಿಕೊಡುವ ಸಲುವಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ತಯಾರಿಸುವ ಎಲ್ಲ ಉತ್ಪನ್ನಗಳ ಮೇಲೆ ಕೆಎಸ್‌ಡಿಎಲ್ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯರ ಭಾವಚಿತ್ರಗಳನ್ನು ಮುದ್ರಿಸಲು ನಿರ್ಧಾರ ಮಾಡಲಾಗಿದೆ. ಆ ಮೂಲಕ ಸಂಸ್ಥೆ ಸ್ಥಾಪಿಸಿದ ಮಹನೀಯರಿಗೆ ಗೌರವ ಸೂಚಿಸುವುದರ ಜತೆಗೆ, ಸೋಪ್‌ನ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

1916ರಲ್ಲಿ ಸ್ಥಾಪನೆಯಾದ ಮೈಸೂರು ಸೋಪ್ ಕಾರ್ಖಾನೆ (ಈಗಿನ ಕೆಎಸ್‌ಡಿಎಲ್) ಉತ್ಪನ್ನಗಳು ಈಗಲೂ ನೂರು ವರ್ಷದ ಹಿಂದಿನ ಕಂಪನ್ನು ಹೊರಸೂಸುತ್ತಿವೆ. ದೇಶದಲ್ಲಷ್ಟೆ ಅಲ್ಲದೇ, ವಿಶ್ವದ 14 ರಾಷ್ಟ್ರಗಳಲ್ಲಿ ಕಂಪು ಬೀರಿರುವ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಇತರ ಉತ್ಪನ್ನಗಳ ಬಗೆಗಿನ ಮಾಹಿತಿಯನ್ನು ಜನರಿಗೆ ನೀಡಲಿದೆ.

ಸದ್ಯ ಕಾರ್ಖಾನೆಯು ಸೋಪ್, ಪೇಸ್ಟ್, ಬಾಡಿ ವಾಷ್, ಟಾಲ್ಕಂ ಪೌಡರ್, ಕೊಬ್ಬರಿ ಎಣ್ಣೆ ಸೇರಿ 48 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದೀಗ ಈ ಎಲ್ಲ ಉತ್ಪನ್ನಗಳ ಮೇಲೆ ಭಾವಚಿತ್ರಗಳು ಮುದ್ರಣವಾಗಲಿವೆ.

ಹೊಸ ಉತ್ಪನ್ನಗಳ ಮೇಲೂ ಮುದ್ರಣ: ಸದ್ಯ ಇರುವ 48 ಉತ್ಪನ್ನಗಳ ಜತೆಗೆ ಇದೀಗ ಶ್ರೀಗಂಧದ ಬಾಡಿ ಮಾಯಿಶ್ಚರೈಸರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಜತೆಗೆ ಶ್ರೀಗಂಧವಿಲ್ಲದ ಹೆಲ್ತ್ ಸೋಪ್, ಗ್ಲಿಸರಿನ್ ಸೋಪ್, ಯೂತ್ ಸೋಪ್ ಮತ್ತು ಬ್ಯೂಟಿ ಸೋಪ್‌ಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಈ ಎಲ್ಲ ಉತ್ಪನ್ನಗಳ ಮೇಲೂ ಭಾವಚಿತ್ರಗಳನ್ನು ಮುದ್ರಣ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News