ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್ ಕುಟುಂಬಕ್ಕೆ 3.2 ಕೋಟಿ ರೂ. ಪರಿಹಾರ: ಹೈಕೋರ್ಟ್ ಆದೇಶ

Update: 2019-09-08 16:41 GMT

ಬೆಂಗಳೂರು, ಸೆ.8: ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗದ ಪ್ರತಿಭಾವಂತ ಸಾಫ್ಟ್‌ವೇರ್ ಇಂಜಿನಿಯರ್ ಎನ್.ಬಿ.ಯತೀಂದ್ರನಾಥ್ ಕುಟುಂಬದ ಸದಸ್ಯರಿಗೆ 3.2 ಕೋಟಿ ಪರಿಹಾರ ಮೊತ್ತ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಯತೀಂದ್ರನಾಥ್ ಕುಟುಂಬದ ಸದಸ್ಯರಿಗೆ ವಾರ್ಷಿಕ ಶೇ.9ರಷ್ಟು ಬಡ್ಡಿದರದಲ್ಲಿ 1.70 ಕೋಟಿ ಪರಿಹಾರ ನೀಡಬೇಕೆಂದು ಬೆಂಗಳೂರಿನ 8ನೆ ಹೆಚ್ಚುವರಿ ಲಘು ವ್ಯಾಜ್ಯಗಳ ಮತ್ತು ಮೋಟಾರ ಅಪಘಾತ ಕ್ಲೇಮುಗಳ ನ್ಯಾಯಮಂಡಳಿ 2017ರಲ್ಲಿ ವಿಮಾ ಕಂಪೆನಿಗೆ ಆದೇಶಿಸಿತ್ತು. ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ ಮೃತ ಯತೀಂದ್ರನಾಥ್ ಪತ್ನಿ ಹಾಗೂ ಕುಟುಂಬದ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಇದೀಗ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆದೇಶಿಸಿದೆ.

ಪರಿಹಾರ ಮೊತ್ತದಲ್ಲಿ ಯತೀಂದ್ರನಾಥ್ ಪತ್ನಿ ಮತ್ತು ಅವರ ಅಪ್ರಾಪ್ತ ವಯಸ್ಸಿನ ಪುತ್ರನಿಗೆ ತಲಾ ಶೇ.30ರಷ್ಟು, ತಂದೆ-ತಾಯಿಗೆ ತಲಾ ಶೇ.15, ಅವಿವಾಹಿತ ಸಹೋದರಿಗೆ ಶೇ.10ರಷ್ಟು ಹಣ ವಿತರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು: ಯತೀಂದ್ರನಾಥ್ ಅವರು 2015ರ ಫೆ.10ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಬಾಗೇಪಲ್ಲಿ ಬಳಿಯ ಸುಂಕಲಮ್ಮ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಮಧ್ಯಾಹ್ನ 3.30ರ ಸಮಯದಲ್ಲಿ ಪರಗೊಂಡು ಗ್ರಾಮದ ಬಳಿ ಪಲ್ಟಿ ಹೊಡೆದಿತ್ತು. ಈ ಅಪಘಾತದಲ್ಲಿ ಯತೀಂದ್ರನಾಥ್ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News