ರಂಗಾಯಣದ ನಿರ್ದೇಶಕರ ವಜಾ ಕಲಾವಿದರಿಗೆ ಮಾಡಿದ ಅಪಮಾನ: ಹಿರಿಯ ರಂಗಕರ್ಮಿ ಪ್ರಸನ್ನ
ಮೈಸೂರು,ಸೆ.16: ರಾಜ್ಯದ ನಾಲ್ಕು ಜನ ರಂಗಾಯಣದ ನಿರ್ದೇಶಕರನ್ನು ವಿನಃ ಕಾರಣ ಏಕಾಏಕಿ ಕಿತ್ತು ಹಾಕಿರೋದು ಕಲಾವಿದರಿಗೆ ಹಾಗೂ ಸಂಸ್ಥೆಗೆ ಮಾಡಿದ ಅಪಮಾನ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆ ರಂಗಾಯಣ ತನ್ನ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಹೀಗಿದ್ದರೂ ನಿರ್ದೇಶಕರನ್ನು ಈ ರೀತಿ ಅಧಿಕಾರದಿಂದ ತೆಗೆದು ಹಾಕುವುದು ಕಾನೂನಾತ್ಮಕವಾಗಿ ತಪ್ಪು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ಬಾರದೆ ಕ್ರಮ ಜರುಗಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಕಲಾವಿದರು, ಗಾಂಧಿ ಹಾಗೂ ಲೋಹಿಯ ವಾದಿಗಳನ್ನು ಪಕ್ಷದ ಏಜೆಂಟರೆಂದು ಪರಿಗಣಿಸುತ್ತಿರುವುದು ದುರದೃಷ್ಟಕರ. ನಾವ್ಯಾವ ಪಕ್ಷದ ನಿಷ್ಟರಲ್ಲ. ನಮ್ಮದೇ ಸ್ವಂತ ವಿವೇಚನೆಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ವಜಾಗೊಳಿಸಿದ್ದು ಖಂಡನೀಯ. ಮುಂದಿನ ದಿನಗಳಲ್ಲಿ ನೇಮಕ ಮಾಡುವ ನಿರ್ದೇಶಕರನ್ನು ಪಕ್ಷದ ಏಜೆಂಟರೆಂದೇ ಭಾವಿಸುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಜಾಗೊಂಡ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ಕಾಲೇಜು ರಂಗೋತ್ಸವ, ಬಹುರೂಪಿ ಸೇರಿದಂತೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಂಗಾಯಣವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿರುವೆ. ಇನ್ನೂ ಹತ್ತು ತಿಂಗಳ ಸಮಯವಿತ್ತು. ಹೀಗಿದ್ದರೂ ಯಾವುದೇ ಕಾರಣ ನೀಡದೇ ತೆಗೆದುಹಾಕಿರುವುದು ಕಲಾವಿದರಿಗೆ ಮಾಡಿದ ಅಪಮಾನ. ನಿಷ್ಠುರವಾದಿಗಳಾದ ನಮ್ಮನ್ನು ನಮ್ಮ ಪಾಡಿಗೆ ಬಿಡಿ ನಮ್ಮ ಹಕ್ಕನ್ನು ಕಿತ್ತುಕೊಳ್ಳಬೇಡಿ ಎಂದು ಆಗ್ರಹಿಸಿದರು.
ಸರ್ಕಾರ ಆದೇಶವನ್ನು ಈ ಕೂಡಲೇ ಹಿಂಪಡೆದು ರಂಗಾಯಣವನ್ನು ಸ್ವತಂತ್ರ್ಯ ಸಂಸ್ಥೆಯಾಗಿ ಮುಂದುವರೆಯಲು ಅವಕಾಶ ನೀಡಬೇಕೆಂದು ಮಾಜಿ ನಿರ್ದೇಶಕರಾದ ರಾಜೇಂದ್ರ ಜನ್ನಿ, ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಪ್ರಕಾಶ ಗರುಡ ಹಾಗೂ ಇತರರು ಒಕ್ಕೊರಲಿನಿಂದ ಆಗ್ರಹಿಸಿದರು.