ಬಿಎಸ್‌ವೈ ವಿರೋಧಿಗಳಿಗೆ ಪಕ್ಷದಲ್ಲಿ ಮಣೆ: ಯಡಿಯೂರಪ್ಪ- ನಳೀನ್ ಕುಮಾರ್ ನಡುವೆ ‘ಶೀತಲ ಸಮರ’

Update: 2019-09-26 14:46 GMT

ಬೆಂಗಳೂರು, ಸೆ. 26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಡುವೆ ಶೀತಲ ಸಮರ ಆರಂಭವಾಗಿದ್ದು, ಬಿಎಸ್‌ವೈ ವಿರೋಧಿಗಳಿಗೆ ಕಟೀಲ್ ಪಕ್ಷದ ಪ್ರಮುಖ ಸ್ಥಾನಗಳನ್ನು ನೀಡುತ್ತಿರುವುದು ಪಕ್ಷದಲ್ಲಿ ಬಣ ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಿದೆ ಎನ್ನಲಾಗಿದೆ.

ಬಿಎಸ್‌ವೈ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿ ಪಕ್ಷದ ಸ್ಥಾನ ಕಳೆದುಕೊಂಡಿದ್ದ ಮಾಜಿ ಶಾಸಕ ನಿರ್ಮಲ್‌ ಕುಮಾರ್ ಸುರಾನ ಮತ್ತು ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ಗೆ ನಳೀನ್ ಕುಮಾರ್ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷದ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಎರಡು ವರ್ಷಗಳ ಹಿಂದೆ ನಿರ್ಮಲ್ ಕುಮಾರ್ ಸುರಾನಾ, ಬಿಎಸ್‌ವೈ ವಿರುದ್ಧ ಬಹಿರಂಗವಾಗಿಯೇ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ್ದರು. ಈ ಮಧ್ಯೆ ಬಿಎಸ್‌ವೈ ಕೆಜೆಪಿಯಿಂದ ಬಿಜೆಪಿಗೆ ಬಂದ ವೇಳೆ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸದಿಂದ ಕಾಣುತ್ತಿಲ್ಲ ಎಂದು ಮೇಲ್ಮನೆ ಸದಸ್ಯ ಭಾನುಪ್ರಕಾಶ್ ದೂರಿದ್ದರು.

ಆ ಹಿನ್ನೆಲೆಯಲ್ಲಿ 2017ರಲ್ಲಿ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ನಂತರ ಅವರನ್ನು ಮರಳಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತಾದರೂ, ಆ ಸ್ಥಾನವನ್ನು ಅವರು ನಿರಾಕರಿಸಿದ್ದರು. ಇದೀಗ ಆ ನಾಯಕರಿಗೆ ಕಟೀಲ್ ಮಣೆ ಹಾಕಿದ್ದಾರೆ.

ಸಮಿತಿ ರಚಿಸಿಲ್ಲ: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಸಿಎಂ ಯಡಿಯೂರಪ್ಪ, ಶಾಸಕ ಎಸ್.ರಘು ನೇತೃತ್ವದಲ್ಲಿ ಆಂತರಿಕ ಸಮಿತಿ ರಚಿಸಿದ್ದರು. ಆದರೆ, ಅದರ ಬೆನ್ನಲ್ಲೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್ ಅಂತಹ ಯಾವುದೇ ಸಮಿತಿಯನ್ನು ಪಕ್ಷ ರಚನೆ ಮಾಡಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದರು.

ಮೇಲ್ಕಂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ನಡುವೆ ಸಮನ್ವಯತೆ ಕೊರತೆ ಇದೆ ಎಂಬುದು ಮೇಲುನೋಟಕ್ಕೆ ಗೊತ್ತಾಗುತ್ತಿದೆ. ಜತೆಗೆ ಇದು ಪಕ್ಷದ ವಲಯದಲ್ಲಿ ಮುಜುಗರಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News