ಇವಿಎಮ್ ರಹಸ್ಯ ಬಹಿರಂಗಪಡಿಸಲು ಒತ್ತಾಯಿಸಿ ಪರಿವರ್ತನಾ ಯಾತ್ರೆ

Update: 2019-09-26 18:26 GMT

ಕೋಲಾರ, ಸೆ.26: ಬಹುಜನ ಕ್ರಾಂತಿ ಮೋರ್ಚಾ ಮತ್ತು ಬಹುಜನ ಸಂಘಟನೆಗಳ ಸಹಯೋಗದಲ್ಲಿ ಇವಿಎಮ್ ರಹಸ್ಯ ಬಹಿರಂಗಪಡಿಸಲು ಒತ್ತಾಯಿಸಿ ನಡೆದ ಪರಿವರ್ತನಾ ಯಾತ್ರೆಯು ಕೋಲಾರ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬಳಿಕ ಪ್ರರ್ತಕರ್ತರ ಭವನದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಬಹುಜನ ಕ್ರಾಂತಿ ಮೋರ್ಚಾದ ಸಂಚಾಲಕ ಎಸ್.ಸಿದ್ದಾರ್ಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ, ಈ ಇವಿಎಮ್ ನಿಂದಾಗಿ ಏಕಸ್ವಾಮ್ಯ, ಏಕಾಧಿಪತ್ಯ ಮತ್ತು ಒಂದು ವ್ಯಕ್ತಿ ಕೇಂದ್ರಿತವಾದ ಸರ್ಕಾರ ರೂಪುಗೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಹಾಗಾಗಿ ಇಂದು ನಾವು ಕಾಣುತ್ತಿರುವ ಆರ್ಥಿಕ ಕುಸಿತ, ನಿರುದ್ಯೋಗ ಸೃಷ್ಟಿ, ದೌರ್ಜನ್ಯಗಳು ಹಲ್ಲೆಗಳು ಈ ಏಕಾಧಿಪತ್ಯ ಅವಕಾಶ ಮಾಡಿಕೊಡುತ್ತಿದೆ. ಇದು ಪ್ರಜಾಪ್ರಭುತ್ವವೇ? ಎಂದು ತಾವೆಲ್ಲ ಪ್ರಜ್ಞಾಪೂರಕವಾಗಿ ಆಲೋಚಿಸಬೇಕು. ಇದು ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತಿರುವುದನ್ನು ತಾವೆಲ್ಲರು ಮನಗಾಣಬೇಕು. ಇವಿಎಮ್ ನಮ್ಮ ಹಕ್ಕನ್ನು ಸಮರ್ಪಕವಾಗಿ ಚಲಾಯಿಸಲು ಒಂದು ಮೆಷಿನ್ ಗನ್ ಬುಲೆಟ್ ಅಗಿ ನಮ್ಮಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂದು ತಿಳಿಸಿದರು.

ಮೈನಾರಿಟಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಪ್ರೊ.ವಿಲಾಸ ಖರಾತ್‍ ಜೀ ಪರಿವರ್ತನಾ ಯಾತ್ರಾ ಉದ್ದೇಶಿಸಿ ಮಾತಾನಾಡಿ, ಭಾರತಾದ್ಯಂತ ಇವಿಎಮ್ ರಹಸ್ಯ ಬಯಲು ಯಾತ್ರೆಯ ಬಗ್ಗೆ ಜನ ಜಾಗೃತಿಯನ್ನ ಮಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಈ ನಮ್ಮ ಬಹುಜನ ಕ್ರಾಂತಿ ಮೋರ್ಚಾ ಪರಿವರ್ತನಾ ಯಾತ್ರೆಯನ್ನ ಕಾಶ್ಮೀರದಿಂದ ಕನ್ಯಕುಮಾರಿಯವರೆಗೂ ಜಾಥಾ ಮಾಡುತ್ತಿದ್ದು, ಕೋಲಾರದಲ್ಲಿ ಅದ್ದೂರಿ ಸ್ವಾಗತ ಮಾಡಿದಕ್ಕೆ ತಮ್ಮಗೆ ಅಭಿನಂದನೆಗಳು ಎಂದರು.

ಐಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ಪ್ರಪಂಚದಲ್ಲಿ ಅನೇಕ ರಾಷ್ಟ್ರಗಳು ಈ ಇವಿಎಮ್ ನಲ್ಲಿರುವ ಲೋಪದೋಷಗಳನ್ನು ಗಮನಿಸಿ, ಇವಿಎಮ್ ಅನ್ನು ತಿರಸ್ಕರಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ.ವಿಜಯ್‍ ಕುಮಾರ್ ಮಾತನಾಡಿ, ಮತ ಚಲಾಯಿಸುವ ಹಕ್ಕು ಸಮರ್ಪಕವಾಗಿ ಸರಿಯಾದ ರೀತಿಯಲ್ಲಿ ಸದುಪಯೋಗವಾಗುತ್ತಿದೇಯೇ ಎಂದು ನಮ್ಮನ್ನೆ ನಾವು ಅನುಮಾನಿಸಿಕೊಳ್ಳುವಂತಾಗಿದೆ. ಅದ್ದರಿಂದ ನಮಗೆ ಇಂತಹ ಬುಲೆಟ್ ಬೇಡ. ನಮಗೆ ಬ್ಯಾಲೆಟ್ ಬೇಕು ಎನ್ನುವ ನಿರ್ಣಯಕ್ಕೆ ನಾವು ಬರಬೇಕಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಬಹುಜನ ಕ್ರಾಂತಿ ಮೋರ್ಚಾದ ಡಾ.ಭಾನುಪ್ರಕಾಶ್, ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್, ಎ.ಎಸ್.ಎಸ್.ಕೆ. ರಾಜ್ಯ ಯುವ ಅಧ್ಯಕ್ಷ ನವೀನ್ ಮಹಾರಾಜ್, ಕೃಷ್ಣಯ್ಯ ಬೌದ್ದ್, ಬಹುಜನ ಸಂಘದ ರಾಜ್ಯಾಧ್ಯಕ್ಷ ಹೂಹಳ್ಳಿ ನಾಗರಾಜ್, ಕೆ.ಬಿ.ಎಸ್ ಕಾರ್ಮಿಕ ಘಟಕದ ಅಧ್ಯಕ್ಷ ಬೆಗ್ಲಿ ವೆಂಕಟೇಶ್, ಬುಡ್ಗಜನಾಂಗದ ಅಧ್ಯಕ್ಷ ಡಾ.ಮುರುಗೇಶ್, ಯುವ ಜಾಗೃತಿ ದಳದ ಕುಮಾರಿ ಮೂಕಾಂಬಿಕ, ಸಂಗ್ಗಸಂದ್ರ ವಿಜಯಕುಮಾರ್ ಸೇರಿ ಅನೇಕರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News