ಸಿದ್ದರಾಮಯ್ಯ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ

Update: 2019-09-28 17:34 GMT

ಬೆಳಗಾವಿ, ಸೆ.28: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಿರುವುದು ನಮ್ಮಿಂದಲ್ಲ, ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ. ಆ ವ್ಯಕ್ತಿ ನಾಯಕನಾಗಿರುವ ವರೆಗೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ನಾಯಕ ಎಂದು ಕರೆಸಿಕೊಳ್ಳುವವರು ಒಂದು ಕಡೆ ಸೋಲುತ್ತಾರೆ, ಮತ್ತೊಂದು ಕಡೆ ಅಳುತ್ತಾ, ಅಳುತ್ತಾ ಆಯ್ಕೆಯಾಗಿ ಬರುತ್ತಾರೆ. ಅಂತಹವರು ಹೇಗೆ ನಾಯಕರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ 80 ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಆದರೆ, ಇವರೇ ನಾಯಕರಾಗಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 30 ಜನ ಶಾಸಕರು ಆಯ್ಕೆಯಾಗಿ ಬರುವುದು ಕಷ್ಟ ಎಂದು ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ಒಬ್ಬರು ಕಾಂಗ್ರೆಸ್ ಪಕ್ಷವನ್ನು ಕಪಿ ಮುಷ್ಠಿಯಲ್ಲಿಟ್ಟುಕೊಂಡು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಕೆಟ್ಟ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಹೇಳಿದರು.

ಈ ನಾಯಕರು ನಮ್ಮನ್ನು ಒಂದು ದಿನವು ಕರೆದು ಸರಿಯಾಗಿ ಮಾತನಾಡಿಲ್ಲ. ಒಂದು ವೇಳೆ ಮಾತನಾಡಿಸಿದರೂ ನಮ್ಮನ್ನು ದಬಾಯಿಸುತ್ತಿದ್ದರು. ನಮಗಿಂತ ಮೊದಲು ಅವರಿಗೆ ಈ ಸರಕಾರ ಬೀಳಬೇಕಾಗಿತ್ತು. ಅವರೇನಾದರೂ ನಮ್ಮನ್ನು ಕರೆದು ಮಾತನಾಡಿದ್ದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News