ಶಿವಮೊಗ್ಗದಲ್ಲಿ ಬಿರುಗಾಳಿ ಮಳೆ: ಮನೆ ಗೋಡೆ ಕುಸಿದು ಯುವತಿ ಮೃತ್ಯು

Update: 2019-09-29 14:11 GMT

ಶಿವಮೊಗ್ಗ, ಸೆ. 29: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಬಿದ್ದ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ. ಮನೆ ಗೋಡೆ ಕುಸಿದು ಯುವತಿಯೋರ್ವಳು ಮೃತಪಟ್ಟ ಘಟನೆಯೂ ನಡೆದಿದೆ. 

ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮನೆಗಳ ಮೇಲೆಯೇ ಮರಗಳು ಉರುಳಿ ಬಿದ್ದಿವೆ. ಹೆಂಚಿನ ಮೇಲ್ಛಾವಣಿಗಳು ಹಾರಿ ಹೋಗಿವೆ. ಕೆಲವೆಡೆ ಗೋಡೆಗಳು ಬಿದ್ದಿವೆ. ಸಾವಿರಾರು ಅಡಕೆ, ತೆಂಗಿನ ಮರ, ಬಾಳೆ ಗಿಡಗಳು ಧರಾಶಾಹಿಯಾಗಿವೆ. ಹಾನಿಗೀಡಾದ ಪ್ರದೇಶಗಳಿಗೆ ಭಾನುವಾರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಯುವತಿ ಸಾವು: ಹೊಳೆಹೊನ್ನೂರಿನ ಸಿ.ಎನ್.ರಸ್ತೆಯ ಕನ್ನೆಕೊಪ್ಪದಲ್ಲಿ ತಡರಾತ್ರಿ ಧಾರಾಕಾರ ಮಳೆಗೆ ಮನೆಯೊಂದರ ಮಣ್ಣಿನ ಗೋಡೆ ಕುಸಿದು ಯುವತಿಯೋರ್ವಳು ಮೃತಪಟ್ಟಿದ್ದಾಳೆ. ಆಟೋ ಚಾಲಕ ಅಯೂಬ್‍ ಖಾನ್ ಎಂಬವರ ಪುತ್ರಿ ಬೀಬಿ ಖತೀಜಾ (21) ಮೃತಪಟ್ಟವರೆಂದು ಗುರುತಿಸಲಾಗಿದೆ. 

ಗೋಡೆ ಕುಸಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಖತೀಜಾರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಉಳಿದಂತೆ ಮನೆಯಲ್ಲಿದ್ದ ಇತರೆ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ. 

ಮೃತ ಯುವತಿಯ ಮನೆಗೆ, ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ರವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಎಲ್ಲ ರೀತಿಯ ನೆರವು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. 

ಭಾರೀ ಹಾನಿ: ಹೊಳೆಹೊನ್ನೂರು ಹೋಬಳಿಯ ಅರಹತೊಳಲು ವಡ್ಡರಹಟ್ಟಿ ಗ್ರಾಮದಲ್ಲಿ ಭಾರೀ ಪ್ರಮಾಣದ ಹಾನಿ ಸಂಬಂಧಿಸಿದೆ. ಬಿರುಗಾಳಿ ಮಳೆಗೆ ಇಡೀ ಗ್ರಾಮವೇ ತತ್ತರಿಸಿ ಹೋಗಿದೆ. ಸುಮಾರು 106 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕೆಲ ಮನೆಗಳ ಹೆಂಚಿನ ಮೇಲ್ಛಾವಣಿ ಕಿತ್ತು ಹೋಗಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ. 

ತಾಲೂಕು ಆಡಳಿತವು ಗ್ರಾಮದ ಶಾಲೆಯಲ್ಲಿ ಪುನರ್ವಸತಿ ಕೇಂದ್ರ ತೆರೆದಿದೆ. ಸಂತ್ರಸ್ತರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿದೆ. ಉಳಿದಂತೆ ತೋಟಗಳಲ್ಲಿ ಅಪಾರ ಪ್ರಮಾಣದ ಅಡಕೆ, ತೆಂಗು ಮರಗಳು ಹಾಗೂ ಬಾಳೆ ಗಿಡಗಳಿಗೆ ಧಕ್ಕೆಯಾಗಿದೆ. 

ಭೇಟಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ವಡ್ಡರಹಟ್ಟಿ ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲಿಸಿದರು. ಮಳೆಯಿಂದ ಹಾನಿಗೀಡಾದವರಿಗೆ ಸೂಕ್ತ ಕಾಲಮಿತಿಯಲ್ಲಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. 

ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಪುನರ್ವಸತಿ ಕೇಂದ್ರಕ್ಕೆ ಡಿಸಿ ಭೇಟಿ ನೀಡಿ ವೀಕ್ಷಿಸಿದರು. ಅಲ್ಲಿನ ಊಟೋಪಚಾರ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆ ಹಾನಿ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಸೌಲಭ್ಯ ತಲುಪಿಸಬೇಕು. ಈ ಸಂಬಂಧ ಸಮಗ್ರ ವರದಿ ಸಲ್ಲಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದ್ದಾರೆ. 

ಈ ವೇಳೆ ಭದ್ರಾವತಿ ತಹಶೀಲ್ದಾರ್ ಸೋಮಶೇಖರ್, ತಾ.ಪಂ. ಇ.ಓ. ತಮ್ಮಣ್ಣಗೌಡ, ರೆವಿನ್ಯೂ ಇನ್ಸ್ ಪೆಕ್ಟರ್ ಸತ್ಯನಾರಾಯಣ, ಗ್ರಾಮ ಲೆಕ್ಕಿಗ ಇನಾಯತ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿ, ಜನಪ್ರತಿನಿಧಿಗಳು ಹಾಜರಿದ್ದರು. 

ಹಾನಿ: ಉಳಿದಂತೆ ಹನುಮಂತಾಪುರ ಗ್ರಾಮದಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ. ಹೊಳೆಹೊನ್ನೂರು, ಹನುಮಂತಾಪುರ, ವಡ್ಡರಹಟ್ಟಿ, ಅರಹತೊಳಲು ಸುತ್ತಮುತ್ತಲು ಸಾವಿರಾರು ಅಡಕೆ, ತೆಂಗಿನ ಮರ, ಬಾಳೆ ಗಿಡಗಳು ಉರುಳಿ ಬಿದ್ದಿವೆ ಎಂದು ತಿಳಿದುಬಂದಿದೆ. ತೋಟಗಾರಿಕೆ ಇಲಾಖಾಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. 

ಭಾರೀ ಪ್ರಮಾಣದ ನಷ್ಟ: ಶಾಸಕ ಕೆ.ಬಿ.ಅಶೋಕನಾಯ್ಕ್
ತಮ್ಮ ಕ್ಷೇತ್ರ ವ್ಯಾಪ್ತಿಯ ವಡ್ಡರಹಟ್ಟಿ, ಅರಹತೊಳಲು, ಹೊಳೆಹೊನ್ನೂರು, ಹನುಮಂತಾಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಶನಿವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ಭಾರೀ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಸಾವಿರಾರು ಅಡಕೆ, ತೆಂಗು, ಬಾಳೆ ಗಿಡಗಳು ಉರುಳಿ ಬಿದ್ದಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಣೆಗೆ ಸೂಚನೆ ನೀಡಲಾಗಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ವಡ್ಡರಹಟ್ಟಿ ಗ್ರಾಮದಲ್ಲಿ ಅಪಾರ ಪ್ರಮಾಣದ ಮನೆಗಳಿಗೆ ಹಾನಿಯಾಗಿದೆ. ಕೆಲ ಮನೆಗಳ ಸ್ಥಳಾಂತರಕ್ಕೆ ಈ ಹಿಂದೆ ಕ್ರಮಕೈಗೊಳ್ಳಲಾಗಿತ್ತು. ಜಾಗ ಕೂಡ ಗುರುತಿಸಲಾಗಿತ್ತು. ಆದರೆ ಅದರ ಹಕ್ಕುಪತ್ರ ನೀಡಿರಲಿಲ್ಲ. ಅಕ್ಟೋಬರ್ 2 ರಂದು ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ಕೆ.ಬಿ.ಅಶೋಕನಾಯ್ಕ್  ತಿಳಿಸಿದ್ದಾರೆ. 

ಸಂತ್ರಸ್ತರ ಜೊತೆ ಊಟ ಮಾಡಿದ ಜಿಲ್ಲಾಧಿಕಾರಿ

ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂತ್ರಸ್ತರಿಗೆ ತೆರೆಯಲಾಗಿರುವ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟವನ್ನು ತಾವು ಕೂಡ ಸೇವಿಸುವ ಮೂಲಕ, ಗುಣಮಟ್ಟ ಪರಿಶೀಲಿಸಿದರು. ಗುಣಮಟ್ಟದ ಆಹಾರ ನೀಡಬೇಕು. ಎಲ್ಲ ಸೌಲಭ್ಯ ಕಲ್ಪಿಸಬೇಕು. ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 'ಮಳೆಯಿಂದ ಹಾನಿಗೊಳಗಾದವರಿಗೆ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು. ತಾತ್ಕಾಲಿಕ ಪರಿಹಾರ ಬಿಡುಗಡೆಗೂ ಸೂಚಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News