'ಸ್ವಚ್ಛ ಭಾರತ' ಘೋಷಣೆ ಆಂದೋಲನದ ರೂಪ ಪಡೆದಿದೆ: ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್

Update: 2019-09-30 18:23 GMT

ಚಿಕ್ಕಮಗಳೂರು, ಸೆ.30: ಸ್ವಚ್ಛ ಭಾರತ ಎಂಬುದು ಒಂದು ಘೋಷಣೆಯಾಗಿ ಉಳಿದಿಲ್ಲ, ಅದು ಆಂದೋಲನದ ರೂಪ ತಳೆದಿದ್ದು, ಈಗ ಜನರಿಗೆ ಸ್ವಚ್ಛ ಭಾರತದ ಅರಿವು ಮೂಡುತ್ತಿದೆ. ಇದರಿಂದ ಉತ್ತಮ ಮತ್ತು ಆರೋಗ್ಯ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಹೇಳಿದರು.

ನಗರದ ರಾಮೇಶ್ವರ ನಗರದಲ್ಲಿ ಸ್ವಚ್ಛ ಟ್ರಸ್ಟ್ ಹಮ್ಮಿಕೊಂಡಿದ್ದ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ ಗಣ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 2011ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಬೇರೆಯವರನ್ನು ಮಾಡಿ ಎಂದು ಸಲಹೆ ನೀಡಿದ್ದೆ. ಅವರು ತಿರಸ್ಕರಿಸಿದ ಕಾರಣ ಸಚಿವ ಸ್ಥಾನ ನನ್ನ ಪಾಲಿಗೆ ಬಂದಿತ್ತು. 15 ತಿಂಗಳು ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದ ಅವಧಿಯಲ್ಲಿ ಅಂದು ನಿರ್ಮಲ ಭಾರತ ಅಭಿಯಾನ ಯೋಜನೆಗೆ ಚಾಲನೆ  ನೀಡಿದ್ದೆ. ಆ ಯೋಜನೆ ಇಂದು ಸ್ಚಚ್ಛ ಭಾರತ ಅಭಿಯಾನವಾಗಿ ರೂಪಾಂತರಗೊಂಡಿದೆ ಎಂದರು.

ಸ್ವಚ್ಛ ಟ್ರಸ್ಟ್ ನವರು ನಗರದ ಸ್ವಚ್ಛತೆಗೆ ಪಣತೊಟ್ಟು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಶಾಲಾ ಕಾಲೇಜುಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕೋಟೆಕೆರೆ, ಬಸವನಹಳ್ಳಿ ಕೆರೆಗಳಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ಜಿಲ್ಲೆ ಹಾಗೂ ನಗರದ ಸೌಂದರ್ಯಕ್ಕೆ ಇದು ಕಪ್ಪು ಚುಕ್ಕೆಯಾಗಿದ್ದು, ಮಹಿಳೆಯರೇ ಹೆಚ್ಚಿರುವ ಸ್ವಚ್ಛ ಟ್ರಸ್ಟ್ ಮುತುವರ್ಜಿ ವಹಿಸಿ ಈ ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಈ ಮೂಲಕ ನಗರದ ಜನರು ಆರೋಗ್ಯವಂತರಾಗಲು ಸಾಧ್ಯವಿದೆ ಎಂದರು.

ಟ್ರಸ್ಟ್ ಅಧ್ಯಕ್ಷೆ ಡಾ.ಶುಭಾ ವಿಜಯ್ ಮಾತನಾಡಿ, 2001ನೇ ಸಾಲಿನಲ್ಲಿ ನಗರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರಂಭಿಸಿದ ಸಂಸ್ಥೆ ಸ್ವಚ್ಛ ಟ್ರಸ್ಟ್ ಗೆ 19 ವರ್ಷ ತುಂಬಿದೆ. ಇಂದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮನೆ ಕಸ ಸಂಗ್ರಹದಿಂದ ಆರಂಭವಾಗಿದ್ದ ಈ ಟ್ರಸ್ಟ್ ನ ಧ್ಯೇಯ ಪ್ಲಾಸ್ಟಿಕ್ ಮುಕ್ತಗೊಳಿಸುವುದು, ಗಿರಿಶ್ರೇಣಿ ಸೌಂದರ್ಯೀಕರಣಕ್ಕಾಗಿ ಚೆಕ್‍ ಪೋಸ್ಟ್ ನಿರ್ಮಾಣ ಮಾಡಿ ಪ್ರವಾಸಿಗರು ತರುವ ಮದ್ಯದ ಬಾಟಲಿ, ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಎಲ್ಲ ಅಡೆ ತಡಗಳನ್ನು ಸಮನಾಗಿ ಸ್ವೀಕರಿಸಿ ಸ್ವಂತ ಆಡಳಿತ ಕಚೇರಿಯನ್ನು ನಿರ್ಮಾಣ ಮಾಡುವ ಮೂಲಕ ಎಲ್ಲ ಸದಸ್ಯರು ಮತ್ತು ಸಾರ್ವಜನಿಕರು ಮತ್ತು ಧಾನಿಗಳ ಸಹಕಾರದಿಂದ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ನಿವೃತ್ತ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸ್ವತಂತ್ರವಾಗಿ ಕೆಲವು ವಿಚಾರಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರೆ ಅದು ಜಿಲ್ಲಾಧಿಕಾರಿ ಹುದ್ದೆಗೆ ಮಾತ್ರ. ಅದಕ್ಕೆ ಕೂಡ ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಈ ಅವಕಾಶ ಕಡಿಮೆಯಾಗಿದೆ. ಇದಕ್ಕೆ ಕೆಲಸದ ಒತ್ತಡವೇ ಕಾರಣ. ನಾನು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಎಲ್ಲ ರಾಜಕೀಯ ಮುಖಂಡರು ಉತ್ತಮ ಕಾರ್ಯಗಳಿಗೆ ಪಕ್ಷಾತೀತವಾಗಿ ಸ್ಪಂದಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ವಚ್ಛ ಟ್ರಸ್ಟ್ ನಗರದ ಸ್ವಚ್ಛತೆಯ ದೃಷ್ಟಿಯಿಂದ ಮುಂದೆ ಬಂದಾಗ ಪರಿಸರದ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಕಾರಣ ನಗರದ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಹೊರಲು ಬಂದವರಿಗೆ ಸ್ಪಂದಿಸಿದೆ. ಅಂದಿನ ಆ ಕಾರ್ಯದಿಂದ ಟ್ರಸ್ಟ್ ಯಶಸ್ವಿಯಾಗಿ ಸಾಗುತ್ತಿರುವುದು ಸಂತಸ ತಂದಿದೆ ಎಂದರು.

ಜೈರಾಂ ರಮೇಶ್, ನಿವೃತ್ತ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಸ್ವಚ್ಛ ಟ್ರಸ್ಟ್ ಕಾರ್ಯಗಳಿಗೆ ಸ್ಪಂದಿಸಿದ ದಾನಿಗಳು ಹಾಗೂ ಹಿತೈಷಿಗಳನ್ನು ಗೌರವಿಸಿ ಸಸಿಗಳನ್ನು ನೀಡಲಾಯಿತು. ಎಂ.ಎಲ್.ಮೂರ್ತಿ, ಡಾ.ಗೀತಾ ವೆಂಕಟೇಶ್, ಡಿ.ಎಚ್.ನಟರಾಜ್, ಎಲ್.ವಿ.ಬಸವರಾಜ್, ಡಾ.ಸಿ.ಕೆ.ಸುಬ್ಬರಾಯ, ರವೀಶ್ ಬಸಪ್ಪ, ಡಾ.ಡಿ.ಎಲ್.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News