ಡಿಕೆಶಿ ನ್ಯಾಯಾಂಗ ಬಂಧನ ಅವಧಿ ಅ.15ರ ತನಕ ವಿಸ್ತರಣೆ

Update: 2019-10-01 14:44 GMT

ಹೊಸದಿಲ್ಲಿ,ಅ.1: ಜಾರಿ ನಿರ್ದೇಶನಾಲಯ (ಈ.ಡಿ.)ವು ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮಂಗಳವಾರ ದಿಲ್ಲಿಯ ವಿಶೇಷ ನ್ಯಾಯಾಲಯವು ಅ.15ರವರೆಗೆ ವಿಸ್ತರಿಸಿದೆ. ಡಿಕೆಶಿಯವರನ್ನು ಇರಿಸಲಾಗಿರುವ ತಿಹಾರ್ ಜೈಲಿನಲ್ಲಿ ಅ.4 ಮತ್ತು 5ರಂದು ಅವರನ್ನು ವಿಚಾರಣೆಗೊಳಪಡಿಸಲೂ ನ್ಯಾಯಾಲಯವು ಈ.ಡಿ.ಗೆ ಅನುಮತಿಯನ್ನು ನೀಡಿದೆ.

ವಿಚಾರಣೆಗೆ ಅನುಮತಿ ನೀಡಬೇಕೆಂಬ ಈ.ಡಿ.ಕೋರಿಕೆಗೆ ತನ್ನ ಕಕ್ಷಿದಾರರ ಆಕ್ಷೇಪವಿಲ್ಲ. ಅವರು ಜಾಮೀನಿನಲ್ಲಿದ್ದರೂ ವಿಚಾರಣೆಗೆ ಯಾವುದೇ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದು ಡಿಕೆಶಿ ಪರ ಹಿರಿಯ ನ್ಯಾಯವಾದಿ ದಯನ್ ಕೃಷ್ಣನ್ ಅವರು ತಿಳಿಸಿದರು.

ಪ್ರಕರಣದಲ್ಲಿ ಜಾಮೀನು ಕೋರಿ ಡಿಕೆಶಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಈ.ಡಿ.ಗೆ ಸೂಚಿಸಿತ್ತು. ಸೆ.3ರಂದು ಡಿಕೆಶಿ ಬಂಧನವಾಗಿತ್ತು.

ತೆರಿಗೆ ವಂಚನೆ ಮತ್ತು ಕೋಟ್ಯಂತರ ರೂ.ಗಳ ಹವಾಲಾ ವಹಿವಾಟುಗಳಲ್ಲಿ ಭಾಗಿಯಾಗಿದ್ದ ಆರೋಪವನ್ನು ಡಿಕೆಶಿ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News