ಆರ್‌ಬಿಐಗೆ 6-7 ವರ್ಷಗಳಿಂದ ಸುಳ್ಳು ವರದಿ ನೀಡುತ್ತಿದ್ದ ಪಿಎಂಸಿ ಬ್ಯಾಂಕ್!

Update: 2019-10-01 14:13 GMT

ಮುಂಬೈ,ಅ.1: ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೌಸಿಂಗ್ ಡೆವೆಲಪ್ಮೆಂಟ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿ. (ಎಚ್‌ಡಿಐಎಲ್)ಗೆ ನೀಡಿದ್ದ 6.500 ಕೋ.ರೂ. ಸಾಲ ಬಾಕಿಯುಳಿದಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳೆದ ಆರೇಳು ವರ್ಷಗಳಿಂದ ಸುಳ್ಳು ವರದಿಗಳನ್ನು ನೀಡುವ ಮೂಲಕ ಕತ್ತಲಲ್ಲಿಡಲಾಗಿತ್ತು ಎಂದು ಪಂಜಾಬ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ)ನ ಸದ್ಯ ಅಮಾನತುಗೊಂಡಿರುವ ವ್ಯವಸ್ಥಾಪನಾ ನಿರ್ದೇಶಕ ಜಾಯ್ ಥಾಮಸ್ ಒಪ್ಪಿಕೊಂಡಿದ್ದಾರೆ.

ಈ ಕುರಿತು ಆರ್‌ಬಿಐಗೆ ಬರೆದಿರುವ ಪತ್ರದಲ್ಲಿ, ಪ್ರತಿಷ್ಟೆಗೆ ಹಾನಿಯಾಗುವ ಭಯದಿಂದ ಬ್ಯಾಂಕ್ ಈ ಸಾಲದ ಕುರಿತ ಮಾಹಿತಿಯನ್ನು ಮಂಡಲಿ ಸದಸ್ಯರು, ಲೆಕ್ಕಪರಿಶೋಧಕರು ಮತ್ತು ನಿಯಂತ್ರಕರಿಂದ ಮುಚ್ಚಿಟ್ಟಿತ್ತು ಎಂದು ಥಾಮಸ್ ಒಪ್ಪಿಕೊಂಡಿದ್ದಾರೆ.

ಅಮಾನತುಗೊಳಿಸಲ್ಪಟ್ಟಿರುವ ಥಾಮಸ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಬಾಕಿ ಸಾಲದ ಮೊತ್ತ ತುಂಬ ಹೆಚ್ಚಾಗಿದ್ದ ಕಾರಣ ಅದನ್ನು ಅನುತ್ಪಾದಕ ಎಂದು ವರ್ಗೀಕರಿಸಿದ್ದರೆ ಅದರಿಂದ ಬ್ಯಾಂಕ್ ಲಾಭಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಇದರಿಂದ ಬ್ಯಾಂಕ್‌ನ ಪ್ರತಿಷ್ಟೆಗೆ ಹಾನಿಯಾಗುವ ಅಪಾಯವಿತ್ತು. ಕೆಲವು ಬಾರಿ ವಿಳಂಬವಾದರೂ ಸಾಲಗಳನ್ನು ಮರುಪಾವತಿಸುವಲ್ಲಿ ಎಚ್‌ಡಿಐಎಲ್ ಸಮೂಹ ಉತ್ತಮ ದಾಖಲೆ ಹೊಂದಿದ್ದರಿಂದ ನಾವು ಅವರ ಎಲ್ಲ ಖಾತೆಗಳನ್ನು ಸಾಮಾನ್ಯ ಖಾತೆಗಳೆಂದು ವರದಿ ಮಾಡಿದ್ದೆವು ಎಂದು ಥಾಮಸ್ ಪತ್ರದಲ್ಲಿ ಬರೆದಿದ್ದಾರೆ.

ಎಚ್‌ಡಿಐಎಲ್‌ನ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರ ಖಾತೆಗಳಿಂದ ಕೆಲವೊಮ್ಮೆ ಹೆಚ್ಚುವರಿ ಮೊತ್ತ ಹಿಂಪಡೆಯಲಾಗುತ್ತಿತ್ತು ಮತ್ತು ನಂತರ ಅದನ್ನು ನಿಗದಿತ ಸಮಯದೊಳಗೆ ಮರುತುಂಬಿಸಲಾಗುತ್ತಿತ್ತು. ಈ ಪ್ರಕ್ರಿಯೆಗೆ ನಮ್ಮ ಬ್ಯಾಂಕ್ ಶೇ.18ರಿಂದ ಶೇ.24 ಬಡ್ಡಿ ಹಾಕುತ್ತಿತ್ತು ಮತ್ತು ಉತ್ತಮ ಲಾಭ ಗಳಿಸುತ್ತಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ. 2017ರಲ್ಲಿ ಆರ್‌ಬಿಐ ಅಧಿಕಾರಿಗಳು ಸಾಲದ ವಿವರ ಕೇಳಲು ಆರಂಭಿಸಿದಾಗ ಎಚ್‌ಡಿಐಎಲ್‌ಗೆ ಸೇರಿದ ಪಾವತಿಯಾಗದ ಸಾಲದ ಖಾತೆಗಳನ್ನು ನಕಲಿ ಖಾತೆಗಳೊಂದಿಗೆ ಬದಲಾಯಿಸಲಾಗಿತ್ತು ಎಂದು ಪತ್ರದಲ್ಲಿ ಥಾಮಸ್ ಒಪ್ಪಿಕೊಂಡಿದ್ದಾರೆ.

ಸೆಪ್ಟಂಬರ್ ವೇಳೆಗೆ ಪಿಎಂಸಿಯ 8,880 ಕೋ.ರೂ. ಸಾಲದಲ್ಲಿ ಎಚ್‌ಡಿಐಎಲ್ ಪಾಲು ಶೇ.73 ಆಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಆರು ಪುಟಗಳ ಪತ್ರದಲ್ಲಿ ಜಾಯ್ ಥಾಮಸ್, ಪಿಎಂಸಿ ಬ್ಯಾಂಕ್ ಮತ್ತು ಎಚ್‌ಡಿಐಎಲ್ ನಡುವಿನ ಸಂಬಂಧದ ಹುಟ್ಟು ಮತ್ತು ಬೆಳವಣಿಗೆಯ ಕುರಿತು ವಿವರಿಸಿದ್ದು ಕನಿಷ್ಟ ಮೂರು ಬಾರಿ ಬ್ಯಾಂಕ್ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾಗ ಯಾವ ರೀತಿ ಕಂಪೆನಿ ಹಣ ಸಹಾಯ ನೀಡಿತ್ತು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. 2004ರಲ್ಲಿ ಎಚ್‌ಡಿಐಎಲ್ ಪಿಎಂಸಿ ಬ್ಯಾಂಕ್‌ಗೆ ನೂರು ಕೋ.ರೂ. ನೀಡಿತ್ತು ಎನ್ನುವುದನ್ನೂ ಅವರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News